Mysore
26
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮೈಸೂರು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಆಗ್ರಹ

Demand for job creation in Mysore district

ಮೈಸೂರು : ಜಾಗತಿಕ ಭಯೋತ್ಪಾದನೆಯನ್ನು ವಿಶ್ವದ ಎಲ್ಲ ವೇದಿಕೆಗಳಲ್ಲೂ ಖಂಡಿಸುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಂತರಿಕವಾಗಿ ದಲಿತರು, ಅಲ್ಪಸಂಖ್ಯಾತರ ಮೇಲೆ ಹಿಂಸಾತ್ಮಕ ದಾಳಿ ಮಾಡುವ ಶಕ್ತಿಗಳಿಗೆ ಕುಮ್ಮಕ್ಕು ನೀಡುವಲ್ಲಿ ನಿರತವಾಗಿರುವುದು ವಿಪರ್ಯಾಸ ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಜಗದೀಶ್ ಸೂರ್ಯ ಹೇಳಿದರು.

ಮೈಸೂರು ಜಿಲ್ಲೆಯ ಜನತೆಯ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಸಿಪಿಐ(ಎಂ) ವತಿಯಿಂದ ಭಾನುವಾರ ನಗರದ ಗಾಂಧಿ ವೃತ್ತದಲ್ಲಿ ನಡೆದ ರಾಜಕೀಯ ಪ್ರಚಾರಾಂದೋಲನ ಸಭೆಯಲ್ಲಿ ಅವರು ಮಾತನಾಡಿದರು.

ದೇಶದ ಅರ್ಥ ವ್ಯವಸ್ಥೆಯು ಕಾರ್ಪೊರೇಟ್‌ಗಳ ಕೈವಶವಾಗಿದ್ದು, ಸಾಮಾನ್ಯ ಜನತೆಯ ಮೇಲೆ ನಡೆಯುವ ದಾಳಿಗಳನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ಜನರ ಬದುಕು ದುರ್ಬರವಾಗಿದೆ. ಆರ್ಥಿಕತೆ ಧ್ವಂಸಗೊಂಡಿದೆ ಎಂದರು.

ಜನತೆಯ ಹಿತಾಸಕ್ತಿ ನಗಣ್ಯವಾಗಿ ಕೇವಲ ಕಾರ್ಪೊರೇಟ್ ಕುಳಗಳನ್ನು ಓಲೈಸುವ ಸರ್ಕಾರಗಳು ದುಡಿಯುವ ಜನರ ದುಮ್ಮಾನಗಳಿಗೆ ದನಿಯಾಗುತ್ತಿಲ್ಲ. ಜೀವಪರ ಸಂವೇದನೆಯನ್ನು ಹೊಂದಿಲ್ಲ. ಈ ರೀತಿಯ ವಿಷಮಕಾರಿ ಬೆಳವಣಿಗೆಗಳಿಂದಾಗಿ ಮೈಸೂರು ಜಿಲ್ಲೆಯ ಜನರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯಲ್ಲಿ ಗಮನಾರ್ಹವಾದ ಬೆಳವಣಿಗೆಗಳೇನೂ ಆಗಿಲ್ಲ ಎಂದು ವಿಷಾದಿಸಿದರು.

ಸಿಪಿಐ ಮುಖಂಡ ಕೆ.ಬಸವರಾಜು ಮಾತನಾಡಿ, ಕನಿಷ್ಠ ಬೆಂಬಲ ಬೆಲೆಯನ್ನು ಅವೈಜ್ಞಾನಿಕ ವಿಧಾನದಿಂದ ನಿರ್ಧರಿಸುವ ಸರ್ಕಾರದ ಮಾನದಂಡಗಳಿಂದಾಗಿ ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ನಿರ್ಧರಿಸಲಾಗುತ್ತಿಲ್ಲ. ತೀವ್ರ ಆರ್ಥಿಕ ಒತ್ತಡಗಳಿಂದಾಗಿ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ 73 ರೈತರು ವಿಷ ಸೇವಿಸಿ ಅಸುನೀಗಿದ್ದಾರೆ. ಸಾಂಸ್ಥಿಕ ಸಾಲ ಮತ್ತು ರೈತ ಸ್ನೇಹಿ ಮಾರುಕಟ್ಟೆಯ ನಿರ್ಮಾಣ, ಜೊತೆಗೆ ನನೆಗುದಿಗೆ ಬಿದ್ದಿರುವ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಮೈಸೂರು ಜಿಲ್ಲೆಯ ರೈತರನ್ನು ಸಾವಿನ ಕುಣಿಕೆಯಿಂದ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ಸರ್ಕಾರಿ ಕಾನೂನು ಹಾಗೂ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು, ಮೈಸೂರು ನಗರದಲ್ಲಿ ಸಾರ್ವಜನಿಕ ಆರೋಗ್ಯವನ್ನು ಬಲಪಡಿಸಲು ವಾರ್ಡ್ ಕ್ಲಿನಿಕ್‌ಗಳನ್ನು ತೆರೆಯಬೇಕು, ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಿ ಬಲಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು.

ಸಿಪಿಐ ಮುಖಂಡರಾದ ಲೀಲಾವತಿ, ಶಕುಂತಲಾ, ಗುರುಬಸವರಾಜು, ಯು.ಬಸವರಾಜು, ಸುನಂದಾ, ಜಿ.ಜಯರಾಂ ಮುಂತಾದವರು ಪ್ರಚಾರಾಂದೋಲನ ಸಭೆಯಲ್ಲಿ ಭಾಗವಹಿಸಿದ್ದರು.

Tags:
error: Content is protected !!