Mysore
17
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಲೋಕಸಭಾ ಚುನಾವಣೆ 2024: ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಸಭೆ

ಮೈಸೂರು : ಲೋಕಸಭಾ ಸಭಾ ಚುನಾವಣೆ-2024 ಮಾದರಿ ನೀತಿ ಸಂಹಿತೆ ಜಿಲ್ಲೆಯಲ್ಲಿ ಜಾರಿಯಾಗಿದ್ದು ರಾಜಕೀಯ ಪಕ್ಷಗಳು ಚುನಾವಣಾ ನಿಯಮಾನುಸಾರ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ ಕೆ.ವಿ.ರಾಜೇಂದ್ರ ರಾಜಕೀಯ ಪಕ್ಷಗಳಿಗೆ ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಕಚೇರಿಯ ದೇವರಾಜ ಅರಸು ಸಭಾಂಗಣದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಚುನಾವಣಾ ಆಯೋಗ ನೀಡುವ ಸೂಚನೆಗಳನ್ನು ಪಾಲಿಸಬೇಕು. ಈಗಿನಿಂದಲೇ ಚುನಾವಣೆಗೆ ಸಂಬಂಧಿಸಿದ ನಿಯಮ ಹಾಗೂ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಖಾಸಗಿ ಮನೆ, ಗೋಡೆ ಹಾಗೂ ರಸ್ತೆ ಬದಿ, ಸ್ಥಳೀಯ ಸಂಸ್ಥೆಗಳ ಕಟ್ಟಡ ಇತ್ಯಾದಿಗಳಲ್ಲಿ ರಾಜಕೀಯ ಪಕ್ಷದ ವಿಷಯಗಳ ಕುರಿತು ಗೋಡೆಬರಹ, ಪೋಸ್ಟರ್‌ಗಳು, ಬ್ಯಾನರ್, ಕಟೌಟ್‌ಗಳನ್ನು ಹಾಕಿದರೆ ಅವುಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದರು.

ರಾಜಕೀಯ ಪಕ್ಷಗಳ ಸಂಬಂಧ ಕಾರ್ಯಕ್ರಮ ಸಂಬಂಧ ಅಧಿಕೃತವಾಗಿ ಅನುಮತಿ ಪಡೆಯುವುದು ಕಡ್ಡಾಯ. ಒಂದು ವೇಳೆ ಅನುಮತಿ ಪಡೆಯದಿರುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಚಾರಕ್ಕೆ ಮಕ್ಕಳನ್ನು ಬಳಸಬಾರದು. ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಯಲಿದ್ದು ಈ ಅವಧಿಯಲ್ಲಿ ಪತ್ರಿಕೆಗಳು, ದೃಶ್ಯ ಮಾಧ್ಯಮ, ಕೇಬಲ್ ಟಿವಿ, ಪೇಸ್‌ಬುಕ್, ವಾಟ್ಸ ಆ್ಯಪ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾ ಎಂಸಿಎಂಸಿ ಸಮಿತಿಯ ಅನುಮತಿ ಕಡ್ಡಾಯವಾಗಿದೆ ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿಯನ್ನು ಪರಿಶೀಲನೆ ಮಾಡಿಕೊಂಡು ಯಾವುದೇ ಅರ್ಹ ಸೇರ್ಪಡೆಗಳಿದ್ದಲ್ಲಿ ಹಾಗೂ ತಿದ್ದುಪಡಿಗಳಿದ್ದಲ್ಲಿ ನಿಯಮಾನುಸಾರ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತು ಕ್ರಮಕೈಗೊಳ್ಳುವಂತೆ ಹಾಗೂ ಕೊನೆಯ ಹಂತದಲ್ಲಿ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಅವಕಾಶವಾಗುವುದಿಲ್ಲವಾದ್ದರಿಂದ ಈಗಲೇ ಕ್ರಮಕೈಗೊಳ್ಳುವಂತೆ ರಾಜಕೀಯ ಪಕ್ಷಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

Tags:
error: Content is protected !!