Mysore
18
few clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ: ಹೆಚ್.ಟಿ ಮಂಜು

ಮಂಡ್ಯ: ಪೌತಿ ಖಾತಾ ಆಂದೋಲನ, ಮೋಜಿಣಿ, ಆರ್.ಟಿ.ಸಿ ತಿದ್ದುಪಡಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗುತ್ತದೆ. ಕಾರ್ಯಕ್ರಮ ಆಯೋಜನೆಗೂ ಮುನ್ನ ಕಾರ್ಯಕ್ರಮದ ಉಪಯುಕ್ತತೆಯ ಬಗ್ಗೆ ಜಾಗೃತಿ ಮೂಡಿಸಿ. ಇದರಿಂದ ಹೆಚ್ಚು ಜನರು ಭಾಗವಹಿಸಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಟಿ ಮಂಜು ಅಭಿಪ್ರಾಯಪಟ್ಟರು.

ಅವರು ಇಂದು‌ ಬೂಕನಕೆರೆ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರು ಹಾಗೂ ಗ್ರಾಮೀಣ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಜನಸ್ಪಂದನ/ ಜನತಾ ದರ್ಶನವನ್ನು ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಪ್ರತಿಯೊಂದು ಅರ್ಜಿಯ ವಿವರವನ್ನು ಐ.ಪಿ.ಜಿ.ಆರ್.ಎಸ್ ತಂತ್ರಾಂಶದಲ್ಲಿ ನಮೂದಿಸಿ ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗುವುದು. ಎಲ್ಲಾ ಅರ್ಜಿಗಳ ವಿಲೇವಾರಿ ಕುರಿತು ಸರ್ಕಾರದ ಕಾರ್ಯದರ್ಶಿಗಳು ನಿಗಾ ವಹಿಸುತ್ತಾರೆ ಎಂದರು.

ರೈತರು ಅಥವಾ ಜನಸಮಾನ್ಯರು ಕರೆ ಮಾಡಿದಾಗ ಜಿಲ್ಲಾಧಿಕಾರಿಗಳು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಾರೆ. ಒಂದು ವೇಳೆ ಕಾನೂನು ವ್ಯಾಪ್ತಿಯಲ್ಲಿ ಬರದಿದ್ದರೆ ಮನವರಿಕೆ ಮಾಡಿಕೊಡುತ್ತಾರೆ. ಇವರ ಕಾರ್ಯವೈಖರಿ ಶ್ಲಾಘನೀಯ. ಅಧಿಕಾರಿಗಳು ಸಹ ಜನಸಮಾನ್ಯರಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿ ಎಂದರು.

ಜಿಲ್ಲಾಧಿಕಾರಿ ಡಾ: ಕುಮಾರ ಮಾತನಾಡಿ, ಜನರು ತಮ್ಮ ಕುಂದು ಕೊರತೆ, ಸಮಸ್ಯೆಗಳನ್ನು ಪರಿಹರಿಸಲು ಜನಸ್ಪಂದನ ಕಾರ್ಯಕ್ರಮವನ್ನು ಹೋಬಳಿ ಹಾಗೂ ಗ್ರಾಮಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಜನತಾ ದರ್ಶನ ಜನರು ತಮ್ಮ ಕುಂದು ಕೊರತೆ ಅರ್ಜಿ ಸಲ್ಲಿಸಲು ಉತ್ತಮ ವೇದಿಕೆ ಎಂದರು.

ಜನತಾ ದರ್ಶನದಲ್ಲಿ ಸ್ವೀಕೃತವಾಗುವ ಶೇ 100 ರಷ್ಟು ಅರ್ಜಿಗಳಿಗೂ ಪರಿಹಾರ ನೀಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಕಾನೂನು ಪರಿಮಿತಿಯಲ್ಲಿರುವ ಕುಂದುಕೊರತೆಗಳಿಗೆ 10 ದಿನದ ಒಳಗಾಗಿ ಪರಿಹಾರ ಒದಗಿಸಲಾಗುವುದು ಎಂದರು.

ಬೆಳೆ ವಿಮೆ ರೈತರಿಗೆ ಹೆಚ್ಚು ಉಪಯುಕ್ತವಾಗಿದ್ದು, ನೊಂದಣಿ ಮಾಡಿಕೊಳ್ಳಲು ಜುಲೈ 17 ಕೊನೆಯ ದಿನಾಂಕವಾಗಿರುತ್ತದೆ. ರೈತರು ತಪ್ಪದೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ನೊಂದಣಿ ಮಾಡಿಕೊಳ್ಳಿ ಎಂದು ಹೇಳಿದರು.

ಆರ್.ಟಿ.ಸಿ ಗಳಿಗೆ ಆಧಾರ್ ಸೀಡಿಂಗ್ ಮಾಡುವುದರಿಂದ ಸರ್ಕಾರದ ಯೋಜನೆಗಳನ್ನು ತಲುಪಿಸಲು ಉಪಯುಕ್ತವಾಗುತ್ತದೆ. ರೈತರು ತಮ್ಮ ವ್ಯಾಪ್ತಿಯ ಆರ್. ಐ ಗಳನ್ನು ಸಂಪರ್ಕಿಸಿ ಆರ್.ಟಿ.ಸಿ ಗೆ ಆಧಾರ್ ಜೋಡಣೆ ಮಾಡಿಕೊಳ್ಳಿ. ಕೆ‌.ಆರ್.ಪೇಟೆ ತಾಲ್ಲೂಕಿನಲ್ಲಿ 3,60,000 ಆರ್.ಟಿ.ಸಿ ಗಳಿದ್ದು, 1,50,000 ಆಧಾರ್ ಸೀಡಿಂಗ್ ಆಗಿರುತ್ತದೆ. 15,000 ಮೃತ ಪಟ್ಟ ರೈತರ ವರಸುದಾರರಿಗೆ ಪೌತಿ ಖಾತೆ ಆಗಬೇಕಿರುತ್ತದೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿವಾರು ಪೌತಿ ಖಾತೆ ಆಂದೋಲನ ನಡೆಸುವಂತೆ ತಹಶೀಲ್ದಾರ್ ಗೆ ನಿರ್ದೇಶನ ನೀಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಈ ಸ್ವತ್ತು ಪತ್ರಗಳನ್ನು ಸಂಕೇತಿಕವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಉಪವಿಭಾಗಾಧಿಕಾರಿ ನಂದೀಶ್, ಡಿ.ಡಿ.ಎಲ್ ಆರ್ ಉಮೇಶ್, ತಹಶೀಲ್ದಾರ್ ನಿಸರ್ಗ ಪ್ರಿಯಾ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Tags:
error: Content is protected !!