ಮೈಸೂರು : ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಕುಟುಂಬದವರು, ಗಣ್ಯರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಗೋಕುಲಂನ ಕಾಂಟೂರ್ ರಸ್ತೆಯ ಶ್ಯಾಗಲೆ ಶಿವರುದ್ರಪ್ಪ ಟ್ರಸ್ಟ್‌ನಲ್ಲಿರುವ ಜಾತ್ಯತೀತ ಒಲವಿನ ವಿವಾಹ ವೇದಿಕೆ ಮಾನವ ಮಂಟಪದಲ್ಲಿ ಭಾನುವಾರ ನಡೆದ ಸರಳ ಪ್ರೇಮ ವಿವಾಹದಲ್ಲಿ ಎಸ್.ಪ್ರಿಯಾಂಕ ಹಾಗೂ ಯು.ಕೆ.ಪ್ರಕೃತ್ ಗೌಡ ಪರಸ್ಪರ ಹಾರ ಬದಲಿಸಿಕೊಂಡು ಹಸೆಮಣೆ ಏರಿದರು. ಯಾವುದೇ ಮಂಗಳ ವಾದ್ಯ ಇಲ್ಲದೆ ಕುವೆಂಪು ಅವರ ಆಶಯದಂತೆ ಪ್ರಕೃತ್ ಗೌಡ ಅವರು ಪ್ರಿಯಾಂಕ ಅವರಿಗೆ ತಾಳಿ ಕಟ್ಟುತ್ತಿದ್ದಂತೆ ನೆರೆದಿದ್ದ ಜನರು ಅಕ್ಷತೆ ಕಾಳಿಟ್ಟು ಆಶೀರ್ವಾದ ಮಾಡಿದರು.
ಲಕ್ಷ್ಮೀಕಾಂತ್ ನಗರದ ನಿಸರ್ಗ ಬಡಾವಣೆಯ ಟಿ.ಎಚ್.ಶ್ರೀನಿವಾಸಮೂರ್ತಿ-ದೇವಿ ಶಾರದಾ ದಂಪತಿಯ ಪುತ್ರಿ ಎಸ್.ಪ್ರಿಯಾಂಕ ಮತ್ತು ಮಹಾಲಕ್ಷ್ಮೀ ಬಡಾವಣೆಯ ಯು.ಎಂ.ಕೃಷ್ಣಪ್ಪ ಹಾಗೂ ಎಚ್.ಸಿ.ಶೀಲಾ ದಂಪತಿ ಪುತ್ರ ಯು.ಕೆ.ಪ್ರಕೃತ್ ಗೌಡ ಸರಳ ಪ್ರೇಮ ವಿವಾಹವಾದರು.
ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯಗಳನ್ನು ಬೋಧಿಸುತ್ತಿದ್ದಂತೆಯೇ ಎಸ್.ಪ್ರಿಯಾಂಕ ಹಾಗೂ ಯು.ಕೆ.ಪ್ರಕೃತ್ ಗೌಡ ಪರಸ್ಪರ ಹಾರ ಬದಲಾಯಿಸಿಕೊಂಡರು. ನಂತರ, ವಧುವಿಗೆ ತಾಳಿ ಕಟ್ಟಿದಾಗ ನೆರೆದಿ ದ್ದವರು ಆಶೀರ್ವಾದ ಮಾಡಿದರು.
ಶ್ರೀಮತಿ ಕಾಳಚನ್ನೇಗೌಡ, ಪತ್ರಕರ್ತ ಟಿ.ಗುರುರಾಜ್, ಸಾಮಾಜಿಕ ಕಾರ್ಯಕರ್ತೆ ಮಂಗಳ, ನಿವೃತ್ತ ಅಽಕಾರಿ ರಾಜು, ಉಪನ್ಯಾಸಕರಾದ ಕವಿತ, ಸಾರಿಗೆ ಇಲಾಖೆಯ ಕೃಷ್ಣ, ವಧುವಿನ ಪೋಷಕರಾದ ದೇವಿ ಶಾರದ ಮತ್ತು ಟಿ.ಎಚ್.ಶ್ರೀನಿವಾಸಮೂರ್ತಿ ಮತ್ತಿತರರು ಉಪಸ್ಥಿತರಿದ್ದು ಹಾರೈಸಿದರು.
ಮನವೊಲಿಕೆಗೆ ಯತ್ನ
ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಎಸ್.ಪ್ರಿಯಾಂಕ ಹಾಗೂ ಯು.ಕೆ.ಪ್ರಕೃತ್ ಗೌಡ ಕುಟುಂಬದವರ ಸಮ್ಮುಖದಲ್ಲಿ ಕಲ್ಯಾಣ ಮಂಟಪದಲ್ಲಿ ವಿವಾಹವಾಗುವ ಬಯಕೆ ಹೊಂದಿದ್ದರು. ಈ ವಿಚಾರ ಎರಡೂ ಕುಟುಂಬಗಳ ಮನೆಯವರಿಗೂ ತಿಳಿದಿತ್ತು. ಯು.ಕೆ.ಪ್ರಕೃತ್ ಗೌಡ ಅವರ ಮನೆಗೆ ವಧುವಿನ ಪೋಷಕರು ತೆರಳಿ ಮಾತುಕತೆ ನಡೆಸಿದಾಗ ವರನ ತಂದೆ-ತಾಯಿ ಸಮ್ಮತಿಸಿದ್ದರು. ಆದರೆ, ವರನ ತಾತ-ಅಜ್ಜಿ ಈ ಮದುವೆಗೆ ನಿರಾಕರಿಸಿದ್ದರಿಂದ ಸಮಸ್ಯೆಯಾಯಿತು. ಪ್ರಿಯಾಂಕಳನ್ನು ಬಿಟ್ಟಿರದ ಪ್ರಕೃತ್ ಗೌಡ ಮಾನವ ಮಂಟಪದವರಿಗೆ ವಿಚಾರ ಮುಟ್ಟಿಸಿದರು. ಸಂಚಾಲಕರು ಈ ಕುಟುಂಬಗಳ ಮನವೊಲಿಸಿ ವಿವಾಹ ಮಾಡಿಸಲು ಯತ್ನಿಸಿದರೂ ಸಾಧ್ಯವಾಗದೆ, ವರನ ಪೋಷಕರು ದೂರ ಉಳಿದರೆ, ವಧುವಿನ ಪೋಷಕರು ಮುಂದೆ ನಿಂತು ಮದುವೆ ಮಾಡಿಸಿದರು.





