ಮೈಸೂರು: ದೆಹಲಿ, ಜಾರ್ಖಂಡ್ ರಾಜ್ಯಗಳಲ್ಲಿ ಅಲ್ಲಿನ ಮುಖ್ಯಮಂತ್ರಿಗಳನ್ನು ಬಂಧಿಸಿ ನಡೆಸಿದ ರಾಜಕೀಯ ಷಡ್ಯಂತರವನ್ನು ಬಿಜೆಪಿ ಈಗ ಕರ್ನಾಟಕದಲ್ಲಿ ಜೆಡಿಎಸ್ ಅನ್ನು ಮುಂದಿಟ್ಟುಕೊಂಡು ನಡೆಸಲು ಪ್ರಯತ್ನಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಸ್ಕರ್ ಅಲಿ ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ರಾಜಕೀಯ ಅರಾಜಕತೆಯನ್ನು ಸೃಷ್ಟಿಸಿ, ಸರ್ಕಾರದಲ್ಲಿ ಗೊಂದಲ ಮತ್ತು ಅಸ್ಥಿರತೆಯನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಲು 2 ಸಾವಿರ ಕೋಟಿ ರೂ ಲಂಚದ ಅಗತ್ಯವಿದೆ ಎನ್ನುವ ಪ್ರಕರಣ ಬೆಳಕಿಗೆ ಬಂದಾಗ ವಿವೇಚನೆ ಬಳಸಿ ನೋಟಿಸ್ ನೀಡದ ಇದೇ ರಾಜ್ಯಪಾಲರು, ಇದೀಗ ಅಹಿಂದ ವರ್ಗಗಳ ದೊಡ್ಡ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೋಟಿಸ್ ಕೊಟ್ಟಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರ ಕಚೇರಿಗೆ ಈಗಾಗಲೇ ಬಂದಿರುವ ನೂರಾರು ದೂರುಗಳ ಮೇಲೆ ವರ್ಷಗಟ್ಟಲೇ ಯಾವುದೇ ಕ್ರಮವನ್ನು ತೆಗೆದುಕೊಳ್ಳದ ಇವರು, ಮುಖ್ಯಮಂತ್ರಿಗಳ ಮೇಲೆ ದೂರು ಬಂದ ಅರ್ಧ ಗಂಟೆಯಲ್ಲಿ ನೋಟಿಸ್ ನೀಡುವ ಅವಸರವನ್ನು ಪ್ರದರ್ಶಿಸಿದ್ದಾರೆ.
ಪ್ರಜಾಸತ್ತಾತ್ಮಕ ರೀತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯವಾಗದ ಬಿಜೆಪಿ, ರಾಜ್ಯಪಾಲರ ಮೂಲಕ ಈ ರೀತಿ ಅಡ್ಡದಾರಿ ಹಿಡಿದಿದೆ. ರಾಜ್ಯಪಾಲರ ಈ ಅಸಂವಿಧಾನಿಕ ನಡೆ ಅಹಿಂದ ವರ್ಗಗಳಿಗೆ ಮಾಡಿರುವ ದೊಡ್ಡ ಅವಮಾನ. ರಾಜ್ಯಪಾಲರು ಈ ಕೂಡಲೇ ಮುಖ್ಯಮಂತ್ರಿಗಳಿಗೆ ನೀಡಿರುವ ನೋಟೀಸ್ ಅನ್ನು ಹಿಂಪಡೆಯಬೇಕು. ಬಿಜೆಪಿ-ಜೆಡಿಎಸ್‌ನ ಈ ರಾಜಕೀಯ ಷಡ್ಯಂತರದ ವಿರುದ್ಧ ಅಹಿಂದ ಜನರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.





