ವೀರನಹೊಸಹಳ್ಳಿ : ಕಾಡಂಚಿನಲ್ಲಿ ವಾಸಿಸುವ ಜನರಿಗೆ ಸುರಕ್ಷತೆ ಒದಗಿಸುವುದು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ನಾಗಪುರ ಹಾಡಿಯಲ್ಲಿ ಹುಲಿ ದಾಳಿಗೆ ಬಲಿಯಾಗಿದ್ದ ಹರೀಶ್ ಮನೆಗೆ ಭೇಟಿ ನೀಡಿ ಪರಿಹಾರದ ಮಂಜೂರಾತಿ ಪತ್ರ ವಿತರಣೆ ಮಾಡಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಸುಪಾಸಿನ ಗ್ರಾಮ ವ್ಯಾಪ್ತಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಕ್ಷಿತಾ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
‘ಬಡವರು, ಆದಿವಾಸಿಗಳು ಸಹ ವಾಸಿಸಬೇಕು. ಆ ನಿಟ್ಟಿನಲ್ಲಿ ಅವರಿಗೆ ಭೂಮಿ ಒದಗಿಸಬೇಕು. ಆದಿವಾಸಿಗಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಭರವಸೆ ನೀಡಲಾಗಿದೆ. ಅದರಂತೆ ನಡೆದುಕೊಳ್ಳಬೇಕು. ಮಾನವೀಯತೆಯಿಂದ ನೋಡಬೇಕು ಎಂದು ಶಾಸಕರು ತಿಳಿಸಿದರು.
ಅರಣ್ಯ ಅಂಚಿನಲ್ಲಿಯೂ ಸಾಕಷ್ಟು ಭೂಮಿ ಒತ್ತುವರಿಯಾಗಿದೆ. ಆದಿವಾಸಿಗಳು, ಬಡವರಿಗೆ ಸಹ ವಾಸಕ್ಕೆ ಜಾಗ ಒದಗಿಸಬೇಕಿದೆ ಎಂದು ಹೇಳಿದರು.
ಹುಲಿ ಸೆರೆ ಕಾರ್ಯಾಚರಣೆಗೆ ಸಾಕಾನೆಗಳನ್ನು ಬಳಸಿಕೊಳ್ಳಲಾಗಿದೆ. ಈ ಸಂಬಂಧ ೩ ತಿಂಗಳಿಂದ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸೈನಿಕರಂತೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ಎಸಿಎಫ್ ಮಹಾದೇವಯ್ಯ ಮಾತನಾಡಿ, ಹುಲಿಯ ಚಲನವಲನದ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ವಲಯ ಅರಣ್ಯಾಧಿಕಾರಿ ನಂದಕುಮಾರ್ ಸುಬ್ರಹ್ಮಣ್ಯ, ಎಪಿಎಂಸಿ ಮಾಜಿ ಅದ್ಯಕ್ಷ ಸುಭಾಷ್, ಹೊಸೂರು ಅಣ್ಣಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಸತೀಶ್, ಪಾಪಣ್ಣ, ಹರವೆ ಶ್ರೀಧರ್, ವಿಜಿ, ವಸಂತ, ಶಿವಣ್ಣ , ಅಧಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.





