Mysore
35
scattered clouds

Social Media

ಸೋಮವಾರ, 11 ಮೇ 2026
Light
Dark

ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಂಸಿಎ, ಎಂಬಿಎ ಪ್ರಾರಂಭೋತ್ಸವಕ್ಕೆ ಚಾಲನೆ

ಮೈಸೂರು : ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ನಗರದ ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಲಾದ ಎಂಸಿಎ ಮತ್ತು ಎಂಬಿಎ ಸ್ನಾತಕೋತ್ತರ ತರಗತಿಗಳಿಗೆ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಚಾಲನೆ ನೀಡಿದರು.

ನಗರದ ಸಂತ ಫಿಲೋಮಿನಾ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಎಂಬಿಎ ಮತ್ತು ಎಂಸಿಎ ಕಾರ್ಯಕ್ರಮಗಳ ಪ್ರಾರಂಭೋತ್ಸವದ ಅಧ್ಯಕ್ಷತೆಯನ್ನು ವಹಿಸಿದ್ದ ಮೈಸೂರು ಧರ್ಮ ಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿಗಳಾದ ಡಾ. ಬರ್ನಾರ್ಡ್ ಮೊರಾಸ್ ಅವರು ವಿವಿಧ ಧಾರ್ಮಿಕ ಕಾರ್ಯ ನೆರವೇರಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಸಂತ ಫಿಲೋಮಿನಾ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಂಬಿಎ ಮತ್ತು ಎಂಸಿಎ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಸುಸಜ್ಜಿತ ಕಟ್ಟಡ ಅಗತ್ಯವಾದ ಲ್ಯಾಬ್ ಇದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಉಪ ಪ್ರಾಂಶುಪಾಲರಾದ ರೋನಾಲ್ಡ್ ಪ್ರಕಾಶ್ ಕುಟಿನೋ, ಸಂತ ಫಿಲೋಮಿನಾ ಕಾಲೇಜು ಮಹಾವಿದ್ಯಾಲಯವು “ಪ್ರೀತಿಯ ಮುಖೇನ ಜ್ಞಾನ” ಎಂಬ ಧ್ಯೇಯದೊಂದಿಗೆ ೧೯೪೬ರಲ್ಲಿ ಮೈಸೂರು ಮಹಾ ಸಂಸ್ಥಾನದಲ್ಲಿ ಮೊಟ್ಟ ಮೊದಲ ಖಾಸಗಿ ವಿಜ್ಞಾನ ಕಾಲೇಜಾಗಿ ಸ್ಥಾಪಿತಗೊಂಡಿತು.

ನಂತರದ ವರ್ಷಗಳಲ್ಲಿ ಶೈಕ್ಷಣಿಕ ಘನತೆಯನ್ನು ಸಾಕ್ಷೀಕರಿಸುವತ್ತ ನಿರಂತರವಾಗಿ ಸಾಗುತ್ತಾ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಗಣನೀಯ ಸಾಧನೆ ಮತ್ತು ಹಲವು ವಿಕ್ರಮಗಳನ್ನು ಸಾಧಿಸಿದೆ. ಇದಕ್ಕೆ ಪೂರಕವಾಗಿ, ಈ ಶೈಕ್ಷಣಿಕ ಸಾಲಿನಲ್ಲಿ ಎಂ.ಬಿ.ಎ ಮತ್ತು ಎಂ.ಸಿ.ಎ ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಕ್ಸ್‌ಐಎಂಇ ಅಧ್ಯಕ್ಷರಾದ ಪ್ರೊ. ಜೆ. ಫಿಲಿಪ್, ಯುಜಿಸಿ ಶೈಕ್ಷಣಿಕ ಅಧಿಕಾರಿ ಡಾ. ಕೆ.ಸಿ.ಲತಾ ಮತ್ತಿತರರು ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!