ವೀರನಹೊಸಹಳ್ಳಿ: ಹನಗೋಡಿಗೆ ಸಮೀಪದ ನೇರಳಕುಪ್ಪೆ ಗ್ರಾ.ಪಂ.ನ ನೇಗತ್ತೂರಿನಲ್ಲಿ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹುಲಿ ಪತ್ತೆಗೆ ಸಾಕಾನೆ ಸಹಾಯದೊಂದಿಗೆ ಶುಕ್ರವಾರ ಕೂಂಬಿಂಗ್ ಕಾರ್ಯ ಆರಂಭಿಸಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಶೆಟ್ಟಹಳ್ಳಿ ಅರಣ್ಯ ಪ್ರದೇಶದಂಚಿನ ನೇಗತ್ತೂರಿನ ವೆಂಕಟೇಶ್ ರವರ ಜಮೀನಿನಲ್ಲಿ ಹಸುವೊಂದು ಮೇವು ಮೇಯುತ್ತಿದ್ದ ವೇಳೆ ಹುಲಿ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಹುಣಸೂರು ಆರ್‌ಎಫ್‌ಒ ಸುಬ್ರಹ್ಮಣ್ಯರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಹುಲಿ ಪತ್ತೆಗೆ ಸಾಕಾನೆ ಗಣೇಶನ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಹಿಂದೆಯೂ ಅನೇಕ ಬಾರಿ ಹುಲಿ ದಾಳಿ ನಡೆಸಿದಾಗ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರೂ ಹುಲಿ ದಾಳಿ ಮಾತ್ರ ನಿಂತಿಲ್ಲ. ಇದೀಗ ಮತ್ತೆ ಹುಲಿ ಕಾಣಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರೂ, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಕೂಡಲೇ ಹುಲಿ ಸೆರೆಹಿಡಿದು ನೆಮ್ಮದಿಯ ಬದುಕಿಗೆ ಅವಕಾಶ ಕಲ್ಪಿಸಬೇಕೆಂದು ಉದ್ಯಾನದಂಚಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶುಕ್ರವಾರ ಗಣೇಶ ಎಂಬ ಸಾಕಾನೆ ಸಹಾಯದಿಂದ ಹುಲಿ ಪತ್ತೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಇದಲ್ಲದೆ ಹುಲಿ ಚಲನ-ವಲನದ ಬಗ್ಗೆ ಗಮನಿಸಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರಗಳನ್ನಾಧರಿಸಿ ಮತ್ತೆ ಹುಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಆರ್‌ಎಫ್‌ಒ ಸುಬ್ರಹ್ಮಣ್ಯ ತಿಳಿಸಿದ್ದಾರೆ.





