ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.20 ಹಾಗೂ 21ರಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
20ರಂದು ಬೆಳಿಗ್ಗೆ 11.25ಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿಯುವರು. ಮಧ್ಯಾಹ್ನ 12ಕ್ಕೆ ನಗರದ ಕಲಾಮಂದಿರದಲ್ಲಿ ಜಿಲ್ಲಾ ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಸ್ಥೆ ಒಕ್ಕೂಟದಿಂದ ಆಯೋಜಿಸಿರುವ ‘ಬಸವ ಜಯಂತಿ-2026 ಉದ್ಘಾಟನೆ ಹಾಗೂ 2026ನೇ ಸಾಲಿನ ‘ಬಸವಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 2.45ಕ್ಕೆ ರಸ್ತೆ ಮಾರ್ಗವಾಗಿ ಹುಣಸೂರು ತಾಲ್ಲೂಕಿನ ಉಕ್ಕಿನಕಂತೆ ಮಠಕ್ಕೆ ತೆರಳಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಆಯೋಜಿಸಿರುವ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. 3.15ಕ್ಕೆ ಹುಣಸೂರಿನಲ್ಲಿ ಕನಕ ಭವನದಲ್ಲಿ ತಾಲ್ಲೂಕು ಕುರುಬರ ಅಭಿವೃದ್ಧಿ ಸಮಿತಿಯಿಂದ ಹಮ್ಮಿಕೊಂಡಿರುವ ಗಣಪತಿ ದೇವಸ್ಥಾನದ ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.30ಕ್ಕೆ ಗ್ರಾಮದೇವತೆ ಮುತ್ತು ಮಾರಮ್ಮ ದೇವಸ್ಥಾನದ 23 ನೇ ವಾರ್ಷಿಕೋತ್ಸವ, ಬೆಳ್ಳಿರಥ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವರು. 5.30ಕ್ಕೆ ಸಿಟಿಒ ಕಾಲೊನಿಯಲ್ಲಿ ಕನಕ ಸಾಂಸ್ಕ ತಿಕ ಭವನ ಉದ್ಘಾಟನೆ, ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 7.15ಕ್ಕೆ ನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡುವರು.
21ರಂದು ಬೆಳಿಗ್ಗೆ 11ಕ್ಕೆ ಹೆಲಿಕಾಪ್ಟರ್‌ನಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆಯುವ ‘110 ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ’ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 1.30ರ ವೇಳೆಗೆ ಹೆಲಿಕಾಪ್ಟರ್‌ನಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಕ್ರೀಡಾಂಗಣಕ್ಕೆ ಬಂದಿಳಿಯುವರು. ಬಳಿಕ, ಅಲ್ಲಿನ ಹಬಟೂರು ರಸ್ತೆಯ ಪಾರೆಕೊಪ್ಪಲಿನಲ್ಲಿ ನಡೆಯಲಿರುವ ಮಸಣಿಕಮ್ಮ ದೇವಸ್ಥಾನ ನಿರ್ಮಾಣ, ತಾಲ್ಲೂಕು ಒಕ್ಕಲಿಗರ ಸಂಘದ ಸಹಯೋಗದಲ್ಲಿ ನಿರ್ಮಿಸುತ್ತಿರುವ ಕುವೆಂಪು ಭವನ, ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ದೇವಸ್ಥಾನ ಸಂಪರ್ಕಿಸುವ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ, ವಿವಿಧ ಇಲಾಖೆಗಳಿಂದ 419.78 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.20ಕ್ಕೆ ಹೆಲಿಕಾಪ್ಟರ್‌ನಲ್ಲಿ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ಬಂದು, ಸಂಜೆ 6ಕ್ಕೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳುವರು.




