ಮೈಸೂರು: ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿರುವುದು ಪಕ್ಷದ ಇತರರಿಗೂ ಎಚ್ಚರಿಕೆಯ ಗಂಟೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಮಾರ್ಚ್.28) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಕೂಡ ನಮ್ಮ ನಾಯಕರು. ನಾನು ಸಾಕಷ್ಟು ಬಾರಿ ಸ್ವಲ್ಪ ತಿದ್ದಿಕೊಳ್ಳಿ ನಿಮಗೆ ಉತ್ತಮ ಭವಿಷ್ಯವಿದೆ, ಉತ್ತಮ ನಾಯಕರಾಗುತ್ತೀರೆಂದು ಹೇಳಿದ್ದೆ. ಅಲ್ಲದೇ ಅವರಿಗೆ ನಮ್ಮ ಹೈಕಮಾಂಡ್ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಿದ್ದರು. ಆದರೆ ಹೈಕಮಾಂಡ್ ನೋಟಿಸ್ ನೀಡಿದ್ದರೂ ಯತ್ನಾಳ್ ಉತ್ತರ ನೀಡಿಲ್ಲ. ಹೀಗಾಗಿ ಹೈಕಮಾಂಡ್ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು.
ಇನ್ನು ಈಗಲೂ ಇನ್ನೂ ಶಿವರಾಂ ಹೆಬ್ಬಾರ್ ಸೇರಿದಂತೆ ಅನೇಕರು ಪಕ್ಷದ ವಿರುದ್ದ ಮಾತನಾಡುತ್ತಿದ್ದಾರೆ
ಮುಂದಿನ ಸರದಿ ಅವರದೇ ಇರಬಹುದು. ಆದರೆ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಇಲ್ಲಿ ಯಾರರು ಹುಲಿ ಅಲ್ಲ, ಹುಲಿ ಎಂದರೆ ಪಕ್ಷದ ಹೈಕಮಾಂಡ್ ಮನೆಗೆ ಕಳುಹಿಸುತ್ತದೆ. ಹಾಗಾಗಿ ಯಾರೂ ಹೈಕಮಾಂಡ್ ನಿರ್ಧಾರ ವಿರೋಧಿಸಬಾರದು. ಯತ್ನಾಳ್ ಪರ ನಾವಿದ್ದೇವೆ ಎಂದು ಹೇಳಬಾರದು. ಹೊಂದಾಣಿಕೆ ರಾಜಕಾರಣಕ್ಕೆ ಹೈಕಮಾಂಡ್ ಬ್ರೇಕ್ ಹಾಕಲಿದೆ. ಜೊತೆಗೆ ಯತ್ನಾಳ್ ಅವರ ಉಚ್ಛಾಟನೆ ಪಕ್ಷದ ವಿರುದ್ಧ ನಡೆಯುವವರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಆ ಜೀ ಈ ಜೀ ಗಳಿಂದ ಯತ್ನಾಳ್ ರಾಜಕೀಯ ಭವಿಷ್ಯ ಹಾಳಾಯ್ತು ಎಂಬ ಕಾಂಗ್ರೆಸ್ ಟ್ವೀಟ್ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬಿಜೆಪಿ ಬಗ್ಗೆ ಏನು ಹೇಳುವ ನೈತಿಕ ಹಕ್ಕಿಲ್ಲ. ಏಕೆಂದರೆ ಅವರ ತೂತುಗಳೇ ನೂರಾರಿದೆ. ಮೊದಲು ಅವರು ಅದನ್ನು ಮೊದಲು ಮುಚ್ಚಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಸತೀಶ್ ಜಾರಕಿಹೊಳಿ ಏನು ಪಕ್ಷದ ಒಡೆದು ಸಿಎಂ ಆಗ್ತಾರಾ?
ಈ ವೇಳೆ ಸತೀಶ್ ಜಾರಕಿಹೊಳಿ ಸಿಎಂ ಆಗಲು ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ ಎಂಬ ಜಿ.ಟಿ.ದೇವೇಗೌಡ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾಕೆ ಭೇಟಿ ಮಾಡಿದ್ದಾರೆ ಗೊತ್ತಿಲ್ಲ. ಈಗಾಗಲೇ ಕಾಂಗ್ರೆಸ್‌ನಲ್ಲಿಯೇ 136 ಸೀಟುಗಳಿವೆ. ಅಂತಹದರಲ್ಲಿ ಅಲ್ಲಿ ಸಿಎಂ ಆಗಲು ಏನು ಕೇಳಲು ಸಾಧ್ಯ. ಸತೀಶ್ ಜಾರಕಿಹೊಳಿ ಅವರು ಏನು ಪಕ್ಷದ ಒಡೆದು ಸಿಎಂ ಆಗ್ತಾರಾ? ಎಂದು ಪ್ರಶ್ನಿಸಿದ್ದಾರೆ.