Mysore
23
light intensity drizzle
Light
Dark

ಕೃಷಿ ಕೈಗಾರಿಕೋದ್ಯಮಿಗಳ ಕೈಗೆ ಸಿಗದಂತೆ ಎಚ್ಚರ ವಹಿಸಬೇಕು: ಡಾ.ಹೆಚ್‌.ಸಿ.ಮಹದೇವಪ್ಪ

ಮೈಸೂರು: ಕೃಷಿ ಕೈಗಾರಿಕೆಯಾಗಿ ಪರಿವರ್ತನೆಯಾಗುತ್ತಿರುವಾಗ ರೈತರಿಗೆ ನೇರವಾಗಿ ಹೆಚ್ಚಿನ ಲಾಭ ದೊರಕಬೇಕು. ಕೈಗಾರಿಕೋದ್ಯಮಿಗಳ ಕೈಗೆ ಸಿಗದಂತೆ ಎಚ್ಚರ ವಹಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ವತಿಯಿಂದ ನಗರದ ನಂಜರಾಜ ಬಹದ್ಧೂರ್ ಛತ್ರದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಸಿರಿಧಾನ್ಯ ಸಂಭ್ರಮಕ್ಕೆ’ ಚಾಲನೆ ನೀಡಿ ಮಾತನಾಡಿದ ಅವರು, ಮೈಸೂರು ಹಾಗೂ ಚಾಮರಾಜನಗರ ಭಾಗದ ರೈತರು ಹೆಚ್ಚಾಗಿ ಸಾವಯವ ಕೃಷಿಯಲ್ಲಿ ತೊಡಸಿಕೊಳ್ಳುವಂತಾಗಲಿ ಎಂದು ಹೇಳಿದರು.

ಭಾರತವು ಮೂಲತಃ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಗ್ರಾಮೀಣ ಭಾಗದ ಜನರ ಮೂಲ ಕಸುಬು ಕೃಷಿಯಾಗಿದೆ. ಅಗತ್ಯಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಆಹಾರ ಉತ್ಪಾದಿಸುವ ಜೊತೆಗೆ ಕೃಷಿಯು ರೈತರ ಕೈಯಲ್ಲೆ ಇರಬೇಕು. ಕೃಷಿ ಕೈಗಾರಿಕೆಯಾಗಿ ಪರಿವರ್ತನೆಯಾಗುತ್ತಿರುವಾಗ ರೈತರಿಗೆ ನೇರವಾಗಿ ಹೆಚ್ಚಿನ ಲಾಭ ದೊರಕಬೇಕು. ಕೈಗಾರಿಕೋದ್ಯಮಿಗಳ ಕೈಗೆ ಸಿಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಕೊಲಂಬಸ್ ಭಾರತಕ್ಕೆ ಬರುವ ಮುನ್ನವೇ ಬಣ್ಣದ ಜೋಳ ಬೆಳೆಯಲಾಗುತ್ತಿತ್ತು ಎಂಬ ಮಾಹಿತಿ ಇದೆ. ರಾಸಯನಿಕ ಗೊಬ್ಬರ ಬಳಸದೇ ಮಣ್ಣಿನ ಫಲವತ್ತತೆ ಕಾಪಾಡುವ ಸಾವಯವ ಕೃಷಿಗೆ ನಾವೆಲ್ಲರೂ ಬೆಂಬಲ ಕೊಡಬೇಕು ಎಂದರು.

ರೈತರು ಸಾವಯವ ಕೃಷಿಯಲ್ಲಿ ತೊಡಗಲು ರಾಜ್ಯ ಸರ್ಕಾರ ಹೆಕ್ಟೇರ್‌ಗೆ ಹತ್ತು ಸಾವಿರ ರೂ. ನೀಡುವ ಮೂಲಕ ಸಿರಿಧಾನ್ಯ ಉತ್ಪಾದನೆಯನ್ನು ಉತ್ತೇಜಿಸುತ್ತಿದೆ. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಕೃಷಿ ಸಚಿವರು ನಮ್ಮೆಲ್ಲರನ್ನೂ ಸೇರಿಸಿ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಆಚರಣೆಯನ್ನು ಮಾಡಿದ್ದರು ಎಂದು ತಿಳಿಸಿದರು‌.

ನಟಿ, ರಂಗಕರ್ಮಿ ಅಕ್ಷತಾ ಪಾಂಡವಪುರ ಅವರು ಪೌಷ್ಠಿಕ ಪಾಕ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಹಾವೇರಿಯ ಸಿರಿಧಾನ್ಯ ಸಂರಕ್ಷಕ ವೀರಭದ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ದೇವಧಾನ್ಯ ರೈತ ಉತ್ಪಾದಕರ ಕಂಪನಿ ನಿರ್ದೇಶಕಿ ಸಾವಿತ್ರಿ ಕೊಡ್ಲಿ, ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಇದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ