ಮೈಸೂರು: ಡಿಜಿಪಿ ಕೆ.ರಾಮಚಂದ್ರ ರಾವ್ ಅವರಿಗೆ, ಪುತ್ರಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಿಕ್ಕಿಕೊಂಡ ಬೆನ್ನಲ್ಲೇ ಇನ್ನೊಂದು ಸಂಕಷ್ಟ ಎದುರಾಗಿದೆ. 11 ವರ್ಷಗಳ ಹಿಂದೆ ಅವರ ಹೆಸರು ತಳಕು ಹಾಕಿಕೊಂಡಿರುವ 2014ರ ಇಲವಾಲ ಪೊಲೀಸ್ ದರೋಡೆ ಪ್ರಕರಣವನ್ನು ರಿ-ಓಪನ್ ಮಾಡಿ ತನಿಖೆ ನಡೆಸುವಂತೆ ಸಿಬಿಐಗೆ ದೂರುದಾರ ಸ್ನೇಹಮಯಿ ಕೃಷ್ಣ ಪತ್ರ ಬರೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹೌದು, ರಾಮಚಂದ್ರ ಅವರಿಗೆ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಮಲಮಗಳು ರನ್ಯಾ ಅವರಿಂದ ಯಾವಾಗ ಬೇಕಾದರೂ ಡಿಆರ್‌ಐ, ಸಿಬಿಐ ಹಾಗೂ ಇ.ಡಿ. ತನಿಖಾ ಸಂಸ್ಥೆಗಳಿಂದ ತನಿಖಾ ವಿಚಾರಣೆ ಎದುರಾಗುವ ಸಾಧ್ಯತೆ ಇದೆ. ಈ ಮಧ್ಯೆಯೇ ಅವರಿಗೆ 2014ರ ಪ್ರಕರಣದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ, ಇಲವಾಲ ದರೋಡೆ ಪ್ರಕರಣವನ್ನು ಮತ್ತೆ ರಿ-ಓಪನ್ ಮಾಡಿ ತನಿಖೆ ನಡೆಸಬೇಕು ಎಂದು ಸಿಬಿಐಗೆ 9 ಪುಟಗಳ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ?
11 ವರ್ಷಗಳ ಹಿಂದೆ 2.27 ಕೋಟಿ ರೂ. ಹಾಗೂ 2 ಕೆ.ಜಿ. ಚಿನ್ನ ದರೋಡೆ ಮಾಡಿದ ಕುರಿತು ಪೊಲೀಸರ ವಿರುದ್ಧವೇ ದೂರು ದಾಖಲಾಗಿತ್ತು. ಈ ಬಗ್ಗೆ ಸಿಐಡಿ ತನಿಖೆಯೂ ನಡೆದಿತ್ತು. ಆ ವೇಳೆ ಐಜಿಪಿ ರಾಮಚಂದ್ರ ರಾವ್ ಗನ್‌ಮ್ಯಾನ್ ಹಾಗೂ ಸೌತ್ ಪೊಲೀಸ್ ಠಾಣೆ ಸಿಬ್ಬಂದಿ ಸೇರಿ ಡಿವೈಎಸ್‌ಪಿ ಸ್ಕ್ವಾಡ್ ಮೇಲೆ ದರೋಡೆ ಆರೋಪ ಬಂದಿತ್ತು. ಆದರೆ ಈ ಕೇಸ್‌ನಲ್ಲಿ ವಿಚಾರಣೆ ನಡೆದು ಎಲ್ಲರೂ ಆರೋಪ ಮುಕ್ತರಾಗಿದ್ದರು.
ಸಿಐಡಿ ಅಧಿಕಾರಿಗಳು ಇಲ್ಲಿಯವರೆಗೂ ಗೋಲ್ಡ್ ಸ್ಮಗ್ಲಿಂಗ್ ಮತ್ತು ಹವಾಲ ಹಣದ ಮೂಲದ ಬಗ್ಗೆ ಯಾವುದೇ ತನಿಖೆ ನಡೆಸಿರಲಿಲ್ಲ. ಆದರೆ ಇದೀಗ ಈ ಪ್ರಕರಣವನ್ನು ಮರುಜೀವ ನೀಡಿ ತನಿಖೆ ನಡೆಸಬೇಕೆಂದು ದೂರು ನೀಡಿದ್ದಾರೆ. ಈ ದೂರಿನೊಂದಿಗೆ ವೀಡಿಯೋ ಸಾಕ್ಷಿಗಳು ಹಾಗೂ ಇತರ ದಾಖಲೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೇ 2014 ರಿಂದಲೇ ಗೋಲ್ಡ್ ಸ್ಮಗ್ಲಿಂಗ್ ನಡೆದುಕೊಂಡು ಬರುತ್ತಿದೆ ಆರೋಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಪ್ರಕರಣದಲ್ಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿದ್ದರೆ ಇಂತಹ ಪ್ರಕರಣ ಮರುಕಳಿಸುವುದನ್ನು ತಡೆಯಬಹುದಿತ್ತು. ಹೀಗಾಗಿ ಈ ಕೇಸ್ ಅನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.





