ಎಚ್.ಡಿ.ಕೋಟೆ : ಅಕ್ರಮ ಸಕ್ರಮ ಖಾತೆ ವಿಚಾರದಲ್ಲಿ ಕರ್ತವ್ಯ ಲೋಪ ಎಸಗಿರುವ ಆರೋಪದಲ್ಲಿ ನಿರ್ಗಮಿತ ತಹಶೀಲ್ದಾರ್ ಕೆ.ಆರ್.ರತ್ನಾಂಬಿಕೆ, ಶಿರಸ್ತೇದಾರ್ ಕುಮಾರ್, ಕಂದಾಯ ನಿರೀಕ್ಷಕ ಮಹೇಶ್, ಗುಮಾಸ್ತ ವಿಷ್ಣು, ಗ್ರಾಮ ಲೆಕ್ಕಿಗ ಅನಿಲ್, ತಾಲ್ಲೂಕು ಕಚೇರಿ ಗುಮಾಸ್ತ ಹರೀಶ್ ವಿರುದ್ಧ ಕ್ರಮ ಜರುಗಿಸುವಂತೆ ಹುಣಸೂರು ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ತಾಲ್ಲೂಕಿನ ಪಡುವಕೋಟೆ ಗ್ರಾಮದ ಸರ್ವೆ ನಂಬರ್‌ಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳಲ್ಲಿ ಅಕ್ರಮ ಸಕ್ರಮದಡಿ ಖಾತೆ ಮಾಡುವಾಗ ದಾಖಲಾತಿಗಳ ಪರಿಶೀಲನೆಯನ್ನು ಸರಿಯಾಗಿ ಮಾಡದೆ ಕರ್ತವ್ಯ ಲೋಪ ಎಸಗಿದ್ದಾರೆ. ಇವರನ್ನು ಅಮಾನತು ಪಡಿಸಿ ಇಲಾಖಾ ವಿಚಾರಣೆಗೆ ಒಳಪಡಿಸಿ ಶಿಸ್ತು ಕ್ರಮ ಜರುಗಿಸಬೇಕೆಂದು ಪತ್ರದಲ್ಲಿ ಕೋರಿದ್ದಾರೆ.
ಜಮೀನಿನನ್ನು ಮುಜರಾಯಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹರೀಶ್ ಅವರ ಪತ್ನಿ ಭವ್ಯ ಅವರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ ಎಂದು ಗಂಡೇಗೌಡರ ಕಾಲೊನಿಯ ರವಿ ದೂರು ನೀಡಿದ್ದರು.
ಮತ್ತೊಂದು ಪ್ರಕರಣದಲ್ಲಿ ಮುರುಗನಹಳ್ಳಿಯ ಮಾದಮ್ಮ ಸಾಗುವಳಿ ಮಾಡುತ್ತಿದ್ದು ಜಮೀನನ್ನು ಮೈಸೂರಿನ ಸುಜಾತ ಎಂಬುವರಿಗೆ 2 ಎಕರೆ ಮಂಜೂರಾತಿ ನೀಡಲು ನಕಲು ದಾಖಲಾತಿ ಸೃಷ್ಟಿಸಲು ಗ್ರಾಮ ಲೆಕ್ಕಿಗ ಅನಿಲ್ ಮತ್ತು ರಾಜಸ್ವ ನಿರೀಕ್ಷಕ ಮಹೇಶ್ ಸಹಾಯ ಮಾಡಿದ್ದಾರೆ. ಇದೇ ಜಾಗದಲ್ಲಿ ಕೋಳಿ ಫಾರಂ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನೂ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಅಕ್ರಮ ಸಕ್ರಮದಡಿ ಖಾತೆ ವಿಚಾರದಲ್ಲಿ ಕರ್ತವ್ಯ ಲೋಪ ಅಮಾನತು ಪಡಿಸಿ ಶಿಸ್ತು ಕ್ರಮ ಜರುಗಿಸಲು ಮನವಿ