ಹುಣಸೂರು: ನಾಗರಹೊಳೆ ಹುಲಿಸಂರಕ್ಷಿತ ಆನೆ ಚೌಕೂರು ವಲಯದಲ್ಲಿ ಬೇಟೆಗಾರರ ದಾಳಿಗೆ ಕಾಡುಕೊಣವೊಂದು ಬಲಿಯಾಗಿದೆ.
ಬಫರ್ ಪ್ರದೇಶಕ್ಕೆ ಸೇರಿದ ಚನ್ನಂಗಿ ಶಾಖೆಯ ದೇವಮುಚ್ಚಿ ಮೀಸಲು ಅರಣ್ಯ ಪ್ರದೇಶದ ಅಣ್ಣಿಕೆರೆ ಗಸ್ತಿನ ಸಿದ್ದಾಪುರ- ಪಿರಿಯಾಪಟ್ಟಣ ಮುಖ್ಯರಸ್ತೆಯಿಂದ ಪಾರದಕಟ್ಟೆ ಕಳ್ಳಬೇಟೆ ತಡೆ ಶಿಬಿರಕ್ಕೆ ಹೋಗುವ ಅರಣ್ಯ ಪ್ರದೇಶದಲ್ಲಿ ಗುಂಡಿನ ಶಬ್ದ ಕೇಳಿಬಂದಿದೆ. ತಕ್ಷಣ ಜಾಗೃತರಾದ ರಾತ್ರಿ ಗಸ್ತು ಅರಣ್ಯ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದ ವೇಳೆ ಕಳ್ಳ ಬೇಟೆಗಾರರ ಗುಂಡೇಟಿಗೆ ಕಾಡುಕೋಣ ಬಲಿಯಾಗಿರುವುದು ಕಂಡುಬಂದಿದೆ.
ಬಳಿಕ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ, ಹುಣಸೂರು ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ್ ಡಿ.ಎಸ್, ಮುಖ್ಯ ಪಶು ವೈದ್ಯಾಧಿಕಾರಿ ರಮೇಶ್, ವಲಯ ಅರಣ್ಯಾಧಿಕಾರಿ ದೇವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಕೋಣ ಬೇಟೆಯಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ.





