ನಂಜನಗೂಡು : ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳನ್ನು ಸಹ ನಾಚಿಸುವಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಆದರೆ ಇಷ್ಟು ವಿಶೇಷತೆಗಳಿದ್ದರೂ ವಿದ್ಯಾರ್ಥಿಗಳ ದಾಖಲಾತಿ ಕೇವಲ 40ಕ್ಕೆ ಸೀಮಿತವಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಜುಬಿಲಿಯಂಟ್ ಜೆನೆರಿಕ್ಸ್ ಲಿಮಿಟೆಡ್ ಕಂಪನಿಯ CSR ನಿಧಿಯಿಂದ ಸುಮಾರು 1.40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ಈ ಹೊಸ ಶಾಲಾ ಕಟ್ಟಡವನ್ನು 2022ರಲ್ಲಿ ನಂಜನಗೂಡು ಶಾಸಕ ಬಿ. ಹರ್ಷವರ್ಧನ್ ಅವರು ಉದ್ಘಾಟಿಸಿದ್ದರು. ಹೊರಗಿನಿಂದ ನೋಡಿದರೆ ಐಶಾರಾಮಿ ವಿಲ್ಲಾ ಅಥವಾ ಖಾಸಗಿ ಶಾಲೆಯಂತೆ ಕಾಣುವ ಈ ಕಟ್ಟಡದಲ್ಲಿ 11 ವಿಶಾಲ ಕ್ಲಾಸ್‌ರೂಮ್‌ಗಳು, ಸ್ಮಾರ್ಟ್ ಕ್ಲಾಸ್‌ರೂಮ್‌ಗಳು ಮತ್ತು ಕಂಪ್ಯೂಟರ್ ಲ್ಯಾಬ್, ಪೂರ್ಣಾವಯವ ಸೈನ್ಸ್ ಲ್ಯಾಬೊರೇಟರಿ, ಡೈನಿಂಗ್ ಹಾಲ್, ವಿಶಾಲ ಆಟದ ಮೈದಾನ, ಸ್ವಚ್ಛ ಮತ್ತು ಆಧುನಿಕ ಶೌಚಾಲಯಗಳು, ಗ್ರಂಥಾಲಯ, ಆಧುನಿಕ ಡಿಸೈನ್ ಡೆಸ್ಕ್ ಮತ್ತು ಚೇರ್‌ಗಳು, ಪಠ್ಯೇತರ ಚಟುವಟಿಕೆಗಳಿಗೆ ಆಟಿಕೆಗಳು ಹಾಗೂ ಹೈಟೆಕ್ ಶೈಕ್ಷಣಿಕ ಮಾದರಿಗಳಂತಹ ಅತ್ಯಾಧುನಿಕ ಸೌಲಭ್ಯಗಳಿವೆ.
ಆದರೆ ಸ್ಥಳೀಯ ಪೋಷಕರು ಖಾಸಗಿ ಶಾಲೆಗಳ ಕಡೆಗೇ ಮುಖ ಮಾಡುತ್ತಿರುವುದರಿಂದ ಸರ್ಕಾರಿ ಶಾಲೆಗೆ ದಾಖಲಾತಿ ಕಡಿಮೆಯಾಗಿದೆ ಎನ್ನುತ್ತವೆ ವರದಿಗಳು.
ಈ ಕುರಿತು ಮಾತನಾಡಿರುವ ಶಿಕ್ಷಣಾಧಿಕಾರಿ (ಬಿಇಒ) ಮಹೇಶ್ ಎಂ, ಸುಸಜ್ಜಿತ ಹಾಗೂ ಮೌಲ್ಯಯುತವಾದ ಇಂತಹ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡುವಂತೆ ಮನವಿ ಮಾಡಿದ್ದಾರೆ.




