ಮೈಸೂರು: ಬಾಡಿಗೆ ಕೇಳುವ ನೆಪದಲ್ಲಿ ಬಂದು ಮನೆವೊಡತಿಯನ್ನೇ ಕಟ್ಟಿಹಾಕಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ದಂಪತಿಗಳನ್ನು ಬಂಧಿಸುವಲ್ಲಿ ಮೈಸೂರಿನ ಹೆಬ್ಬಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಮೂಲದ ವನಿತಾ (24 ವರ್ಷ) ಹಾಗೂ ಚೇತನ್ (29 ವರ್ಷ) ಪೊಲೀಸರ ಅತಿಥಿಯಾದ ದಂಪತಿಗಳಾಗಿದ್ದಾರೆ.
ಹೆಬ್ಬಾಳದ ಒಂದನೇ ಹಂತದ ನಿವಾಸಿ ನಿವೃತ್ತ ಶಿಕ್ಷಕಿ ಶಾಂತಮ್ಮ ಅವರ ಮನೆಯ ಮಹಡಿಯ ಮೇಲೆ ಖಾಲಿಯಿದ್ದ ಮನೆಯನ್ನು ಬಾಡಿಗೆ ಕೇಳಲು ಚಿತ್ರದುರ್ಗದ ದಂಪತಿ ಆಗಮಿಸಿದ್ದರು. ಮನೆ ಬಾಡಿಗೆ ಬಗ್ಗೆ ಮಾತನಾಡಿ ಬಳಿಕ ಅಡ್ವಾನ್ಸ್ ತರುವುದಾಗಿ ಚೇತನ್ ಎಟಿಎಂಗೆ ಹೋಗಿದ್ದಾನೆ. ಬಳಿಕ ಬಂದು ಎಟಿಎಂ ನಲ್ಲಿ ಹಣವಿಲ್ಲ. ನಿಮ್ಮ ಬಳಿ ಫೋನ್ ಪೇ, ಗೂಗಲ್ ಪೇ ಇದೇಯಾ ಎಂದು ಕೇಳಿದ್ದಾನೆ. ಇದಕ್ಕೆ ಇಲ್ಲ ಎಂದ ಶಾಂತಮ್ಮ ಜತೆ ತುಂಬಾ ಸುಸ್ತಾಗಿ ದಣಿವಾಗಿದ್ದು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದಾರೆ.
ಅವರನ್ನು ಮನೆಯಲ್ಲಿ ಬಿಟ್ಟು ಶಾಂತಮ್ಮ ತರಕಾರಿ ಖರೀದಿಸಲು ಮಾರ್ಕೆಟ್ ಹೋಗಿ ಬಂದಿದ್ದಾರೆ. ಆ ವೇಳೆ ಚೇತನ್ ಹಾಗೂ ವನಿತಾ ದಂಪತಿ ಟ್ರೈನ್‌ಗೆ ತೆರಳುವುದಾಗಿ ತಿಳಿಸಿ ಕುಡಿಯಲು ನೀರು ಕೇಳಿದ್ದಾರೆ.
ನೀರು ನೀಡಲು ಹೋದ ಶಾಂತಮ್ಮರನ್ನು ಹಿಂಬಾಲಿಸಿದ ಚೇತನ್ ಕಟ್ಟಿಹಾಕಿ ಕತ್ತಿನಲ್ಲಿದ್ದ ಐದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಶಾಂತಮ್ಮರನ್ನು ಪ್ರಜ್ಞೆ ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದರು.
ಈ ಘಟನೆ ಸಂಬಂಧ ಶಾಂತಮ್ಮ ಸೊಸೆ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳ್ಳರ ಜಾಡು ಹಿಡಿದ ಪೊಲೀಸರು ಕೇವಲ ಮೂರು ದಿನಗಳಲ್ಲಿ ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡರು. ಬಳಿಕ ಅಪರಾಧಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.