ಎಚ್.ಡಿ.ಕೋಟೆ : ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವನ್ಯಜೀವಿ ವಲಯದ ಕಬಿನಿ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ 5 ರಣಹದ್ದುಗಳು ಮತ್ತು 1 ಸಾಕು ನಾಯಿಯ ಕಳೇಬರ ಪತ್ತೆಯಾಗಿದೆ.
ಅರಣ್ಯ ಸಿಬ್ಬಂದಿ ಎಂದಿನಂತೆ ಗಸ್ತು ನಡೆಸುತ್ತಿದ್ದಾಗ ಮಧ್ಯ ಹಿನ್ನೀರಿನ ತೀರ ಪ್ರದೇಶದಲ್ಲಿ 5 ರಣಹದ್ದುಗಳು ಮತ್ತು 1 ಸಾಕು ನಾಯಿಯ ಕಳೇಬರ ಇರುವುದು ಗೊತ್ತಾಗಿದೆ. ಕೂಡಲೇ ಸಿಬ್ಬಂದಿ ವಲಯ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಶನಿವಾರ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್, ಬಂಡೀಪುರ ಇಲಾಖಾ ಪಶು ವೈದ್ಯಾಧಿಕಾರಿ ಅಮೃತೇಶ್ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೇಲ್ನೋಟಕ್ಕೆ ಇದು ಸಾಕು ನಾಯಿಗೆ ವಿಷ ಪ್ರಾಶನ ಮಾಡಿದ್ದು, ಅದನ್ನು ತಿಂದ ರಣಹದ್ದುಗಳು ಅಸುನೀಗಿವೆ ಎಂದು ಅಭಿಪ್ರಾಯ ಪಡಲಾಗಿದೆ.
ನಾಯಿ ಮತ್ತು ರಣಹದ್ದುಗಳ ದೇಹದ ಒಳ ಅಂಗಾಂಗಗಳ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ತನಿಖೆಗೆ ವಿಧಿ ವಿಜ್ಞಾನ ಪ್ರಾದೇಶಿಕ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ವನ್ಯಜೀವಿ ಅರಣ್ಯ ಪ್ರಕರಣ ದಾಖಲಿಸಲಾಗಿದೆ.





