ಸುತ್ತೂರು : ತಾಲ್ಲೂಕಿನ ತುಮ್ಮನೇರಳೆ ಗ್ರಾಮದಲ್ಲಿ ಶ್ರೀ ನಾಗಲಿಂಗೇಶ್ವರ ಸ್ವಾಮಿಯ ರಥೋತ್ಸವವು ಮಂಗಳವಾರ ಭಕ್ತರ ಜಯಘೋಷಗಳ ನಡುವೆ ವಿಜೃಂಭಣೆಯಿಂದ ಜರುಗಿತು.
ಗ್ರಾಮದ ಶ್ರೀ ನಾಗಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕ್ರಿಯೆಗಳನ್ನು ವಿಧಿ ವಿಧಾನದಂತೆ ನಡೆಸಲಾಯಿತು. ನಂತರ ರಥೋತ್ಸವಕ್ಕೆ ಅಲಂಕರಿಸಿದ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಳೆಯಲಾಯಿತು. ನಂತರ ದೇವಾಲಯದ ಪ್ರಾಂಗಣಕ್ಕೆ ರಥೋತ್ಸವ ಬಂದು ಸೇರಿತು. ರಥೋತ್ಸವದ ವೇಳೆ ಡೊಳ್ಳು ಕುಣಿತ, ವೀರ, ಮಕ್ಕಳ ಕುಣಿತ ಹಾಗೂ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ವಿಶೇಷ ಮೆರಗು ತಂದಿತ್ತು.
ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ತಮ್ಮ ಹರಕೆಗಳನ್ನು ತೀರಿಸಿದರು.