ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ
ಮೈಸೂರು: ವಿದೇಶದ ಮೃಗಾಲಯಗಳಿಂದ ವಿಭಿನ್ನ ಪ್ರಾಣಿಗಳನ್ನು ಕರ್ನಾಟಕದ ಮೃಗಾಲಯಗಳಿಗೆ ತರಿಸಿಕೊಳ್ಳಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂದಾಗಿದೆ.
ವಿಜಯನಗರ ಜಿಲ್ಲೆ ಹಂಪಿ ಸಮೀಪದಲ್ಲಿರುವ ಕಮಲಾಪುರದ ಅಟಲ್‌ಬಿಹಾರಿ ವಾಜಪೇಯಿ ಮೃಗಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಯಿತು.
ಮೃಗಾಲಯಗಳಿಗೆ ಬೇಕಾದ ಪ್ರಾಣಿಗಳನ್ನು ಪಟ್ಟಿ ಮಾಡಿಕೊಂಡು ಪ್ರಾಣಿ ವಿನಿಮಯ ಯೋಜನೆಯಡಿ ತರಿಸಿಕೊಳ್ಳಲು ಯೋಜಿಸಬೇಕು. ನಮ್ಮಿಂದಲೂ ಬೇರೆ ಮೃಗಾಲಯಗಳಿಗೆ ಪ್ರಾಣಿ ನೀಡಿ ಅಲ್ಲಿಂದ ನಮ್ಮ ಮೃಗಾಲಯಗಳಿಗೆ ಬೇಕಾದ ಪ್ರಾಣಿ ತರಿಸಿಕೊಳ್ಳುವಂತೆ ಸೂಚಿಸಲಾಯಿತು ಎಂದು ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ತಿಳಿಸಿದರು.
ಕಮಲಾಪುರ ಮೃಗಾಲಯಕ್ಕೆ ಅನೇಕ ವಿಶೇಷ ಶೈಲಿಯ ಹಳೆ ಮಾದರಿಯ ಕಟ್ಟಡಗಳ ಕೆಲಸ ಹಂಪಿ ಮೃಗಾಲಯದ ಮಾದರಿಯಲೇ ನಡೆಯುತ್ತಿದ್ದು, ನವೆಂಬರ್ ತಿಂಗಳಲ್ಲಿ ವಿವಿಧ ಯೋಜನೆಗಳು ಪೂರ್ಣಗೊಳ್ಳಲಿವೆ. ಮೃಗಾಲಯ ಉದ್ಘಾಟನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಕರೆಯುವುದರ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಿದರು.
ಬನ್ನೇರ್‌ಘಟ್ಟ ಜೂನಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಾಣದ ಕಟ್ಟಡವು ಕೂಡ ಬರದಿಂದ ಸಾಗುತ್ತಿದೆ.ಹಾಗೆಯೇ ಶಿವಮೊಗ್ಗದ ತಾವರೇಕೊಪ್ಪ ಮೃಗಾಲಯದಲ್ಲಿ ರಸ್ತೆ ಕಾಮಗಾರಿ, ಸಫಾರಿಗೆ ಹೊಸ ವಾಹನವನ್ನು ತೆಗೆದುಕೊಳ್ಳಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ( ವನ್ಯಜೀವಿ) ವಿಜಯಕುಮಾರ್ ಗೋಗಿ, ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ, ಸದಸ್ಯರಾದ ಗೋಕುಲ್ ಗೋವರ್ಧನ್, ಜ್ಯೋತಿ ರೇಚಣ್ಣ, ಮೃಗಾಲಯದ ಅಧಿಕಾರಿಗಳು ಹಾಜರಿದ್ದರು.
================
ಅಂತರಾಷ್ಟ್ರೀಯ ಮಟ್ಟದಿಂದ ಪ್ರಾಣಿಗಳನ್ನು ತರುವುದು ಮತ್ತು ನಮ್ಮ ದೇಶದ ಪ್ರಾಣಿಗಳನ್ನು ಅಂತರಾಷ್ಟ್ರೀಯ ಮೃಗಾಲಯಗಳಿಗೆ ನೀಡುವುದರ ಬಗ್ಗೆ ಚರ್ಚಿಸಲಾಗಿದ್ದು, ಅಧಿಕಾರಿಗಳಿಗೆ ಪಟ್ಟಿ ಮಾಡುವಂತೆ ಸೂಚಿಸಲಾಗಿದೆ.
–ಶಿವಕುಮಾರ್, ಅಧ್ಯಕ್ಷರು, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು