Light
Dark

ಮೈಸೂರು ಮೇಯರ್ ಹುದ್ದೆಗೆ ಮತ್ತೆ ಮೈತ್ರಿಯ ಖದರ್!

ಕೊಡು- ಕೊಳ್ಳುವಿಕೆಯ ಲೆಕ್ಕದಲ್ಲಿ ಕಾಂಗ್ರೆಸ್,ಜಾ.ದಳ: ಕಾದು ನೋಡುವ ಲೆಕ್ಕಾಚಾರದಲ್ಲಿ ಕಮಲ ಪಾಳೆಯ

* ಎಚ್.ಎಸ್.ದಿನೇಶ್‌ಕುಮಾರ್
ಮೈಸೂರು: ಮೈಸೂರು ಮಹಾಪೌರರ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮಹಾಪೌರರು ಯಾವ ಪಕ್ಷದವರು ಆಗುತ್ತಾರೆ ಎಂಬ ಕುತೂಹಲ ಮೂರೂ ಪಕ್ಷದ ಕಾರ್ಯಕರ್ತರಲ್ಲಿದೆ.
ಕಳೆದ ಬಾರಿಯ ಕಾಂಗ್ರೆಸ್ ಹಾಗೂ ಜಾ.ದಳ ಹೊಂದಾಣಿಕೆ ಮಾಡಿಕೊಂಡಿತ್ತು. ರುಕ್ಮಿಣಿ ಮಾದೇಗೌಡ ಮಹಾಪೌರರಾಗಿ ಹಾಗೂ ಅನ್ವರ್ ಬೇಗ್ ಉಪ ಮಹಾಪೌರರಾಗಿ ಅಧಿಕಾರ ಹಂಚಿಕೊಂಡಿದ್ದರು. ನಂತರದ ನ್ಯಾಯಾಲಯದ ಆದೇಶದ ಮೇರೆಗೆ ರುಕ್ಮಿಣಿ ಮಾದೇಗೌಡ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದರಿಂದ ಸಹಜವಾಗಿ ಜಾ.ದಳಕ್ಕೆ ಮತ್ತೆ ಮಹಾಪೌರರ ಸ್ಥಾನ ಸಿಗಬೇಕಾಗಿತ್ತು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಹಾಗೂ ಜಾ.ದಳ ಮುಖಂಡರ ಪರೋಕ್ಷ ಸಹಕಾರದೊಂದಿಗೆ ಬಿಜೆಪಿಯ ಸುನಂದಪಾಲನೇತ್ರ ಅವರು ಮಹಾಪೌರರಾಗಿ ಅಧಿಕಾರ ವಹಿಸಿಕೊಂಡರು.
ಇದೀಗ ನಗರಪಾಲಿಕೆಯಲ್ಲಿ ಹೊಂದಾಣಿಕೆಯ ಮಾತುಗಳು ಮುನ್ನೆಲೆಗೆ ಬರುತ್ತಿವೆ. ಸುನಂದ ಪಾಲನೇತ್ರ ಅವರಿಗೆ ಮಹಾಪೌರರ ಸ್ಥಾನ ಸಿಗಲು ನಾವು ಕಾರಣವಾದ್ದರಿಂದ ಬಿಜೆಪಿ ಮುಖಂಡರು ನಮ್ಮ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿಯುವ ಎಲ್ಲಾ ಸಾಧ್ಯತೆಗಳಿವೆ. ಕಾಂಗ್ರೆಸ್‌ನವರು ಜಾ.ದಳವರ ಕಡೆ ನೋಡುತ್ತಿದ್ದಾರೆ. ಆದರೆ ಬಿಜೆಪಿ ಮಾತ್ರ ಕಳೆದ ಬಾರಿಯಂತೆ ಇಬ್ಬರ ಜಗಳದಲ್ಲಿ ನಮಗೆ ಮತ್ತೊಮ್ಮೆ ಅವಕಾಶ ಸಿಕ್ಕರೆ ನೋಡೋಣ ಎನ್ನುವ ತಂತ್ರ ಅನುಸರಿಸುವ ಸಾಧ್ಯತೆಯಿದೆ.

ಕಳೆದ ಬಾರಿ ಕಾಂಗ್ರೆಸ್ ವತಿಯಿಂದ ನಮ್ಮ ಪಕ್ಷಕ್ಕೆ ಮಹಾಪೌರರ ಸ್ಥಾನ ಕೊಡಬೇಕಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ಜಾ.ದಳ ಎಲ್ಲಿದೆ, ಅವರಿಗೇಕೆ ಮಹಾಪೌರರ ಸ್ಥಾನ ಬಿಟ್ಟುಕೊಡಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ನಮಗೂ ಸ್ವಾಭಿಮಾನವಿದೆ ಹೀಗಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರಿಸಲು ಆಗಲಿಲ್ಲ ಎನ್ನುವುದು ಶಾಸಕ ಸಾ.ರಾ.ಮಹೇಶ್ ಅವರ ನುಡಿ. ನಂತರ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು ಹಾಗೂ ಬಿಜೆಪಿ ಶಾಸಕರು ನನ್ನೊಡನೆ ಮಾತನಾಡಿ ಮಹಾಪೌರರ ಸ್ಥಾನ ಪಡೆಯಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದರು. ಕೆ.ಆರ್.ನಗರದ ಹೆಣ್ಣುಮಗಳು ಮಹಾಪೌರರಾಗಲಿ ಎಂದು ನಾವೂ ಕೂಡ ಸಹಕಾರ ನೀಡಿದ್ದೆವು ಎಂದು ಹೇಳಿದ್ದಾರೆ.

 

 

ಶಾಸಕ ಸಾ.ರಾ.ಮಹೇಶ್
ಶಾಸಕ ಸಾ.ರಾ.ಮಹೇಶ್

ಬಿಜೆಪಿ ನಮಗೆ ಬಿಟ್ಟು ಕೊಡಲಿ

ಜಿಲ್ಲಾ ಉಸ್ತವಾರಿ ಸಚಿವರು, ಸಂಸದರು ಹಾಗೂ ಮುಖ್ಯಮಂತ್ರಿಗಳು ನಮಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ನಮ್ಮ ಪಕ್ಷದ ಸದಸ್ಯರಿಗೆ ಮಹಾಪೌರರ ಸ್ಥಾನ ಬಿಟ್ಟುಕೊಡುವುದರ ಮೂಲಕ ತಮ್ಮ ಮಾತನ್ನು ಉಳಿಸಿಕೊಳ್ಳಬೇಕು. ಅವರು ನಮ್ಮ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟುಕೊಡುವ ವಿಶ್ವಾಸ ನನಗಿದೆ ಎಂದು ಶಾಸಕ ಸಾ.ರಾ.ಮಹೇಶ್ ಸ್ಪಷ್ಟವಾಗಿ ಹೇಳುತ್ತಾರೆ.


ಕಾಂಗ್ರೆಸ್‌ನ ಅಯೂಬ್‌ಖಾನ್.
ಕಾಂಗ್ರೆಸ್‌ನ ಅಯೂಬ್‌ಖಾನ್.

ಜಾ.ದಳದವರು ನಮಗೇ ಬೆಂಬಲಿಸಲಿ
ಈ ಹಿಂದೆ ನಾವು ರುಕ್ಮಿಣಿ ಮಾದೇಗೌಡ ಅವರನ್ನು ಮೇಯರ್ ಆಗಿ ಆರಿಸಲು ಸಹಕಾರ ನೀಡಿದ್ದೆವು. ನಂತರ ನಮ್ಮ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟುಕೊಡಬೇಕಿತ್ತು. ಅದು ಏಕೆ ಸಾಧ್ಯವಾಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಾರಿ ಜಾ.ದಳವರು ನಮಗೆ ಬೆಂಬಲ ನೀಡಲಿ.ಇದೀಗ ನಗರಪಾಲಿಕೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೇ? ಬೇಡವೇ ಎಂಬ ಬಗ್ಗೆ ಸ್ಥಳೀಯ ಶಾಸಕರು, ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸೇರಿ ನಿರ್ಧರಿಸಲಿದ್ದಾರೆ. ಅವರ ತೀರ್ಮಾನಕ್ಕೆ ನಾವು ಬದ್ದರಿದ್ದೇವೆ ಎನ್ನುತ್ತಾರೆ ಮಾಜಿ ಮೇಯರ್, ಕಾಂಗ್ರೆಸ್‌ನ ಅಯೂಬ್‌ಖಾನ್.


ಸಂಸದ ಪ್ರತಾಪ್‌ಸಿಂಹ
ಸಂಸದ ಪ್ರತಾಪ್‌ಸಿಂಹ

ಹೊಂದಾಣಿಕೆ ಕುರಿತು ಹಿರಿಯರ ತೀರ್ಮಾನ

ಮಹಾಪೌರರ ಸ್ಥಾನಕ್ಕೆ ಸ್ಪರ್ಧಿಸಬೇಕೇ? ಅಥವ ಜಾ.ದಳ ಜೊತೆ ಮೈತ್ರಿ ಮಾಡಿಕೊಳ್ಳಬೇಕೇ? ಎಂಬ ಬಗ್ಗೆ ಆದಷ್ಟು ಶೀಘ್ರವಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರಿಗೆ ಬರಲಿದ್ದು, ಸ್ಥಳೀಯ ಶಾಸಕರು, ಪಕ್ಷದ ಅಧ್ಯಕ್ಷರು ಹಾಗೂ ನಗರಪಾಲಿಕೆ ಸದಸ್ಯರ ಸಮ್ಮುಖದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂಬುದು ಸಂಸದ ಪ್ರತಾಪ್‌ಸಿಂಹ ಅವರ ವಿವರಣೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ