ಮೈಸೂರು: ರೈತ ದಸರೆಯು ಸೆ.30 ರಿಂದ ಅ.3 ರವರೆಗೆ ನಗರದ ಜೆ.ಕೆ.ಮೈದಾನದಲ್ಲಿ ನಡೆಯಲಿದ್ದು, ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ಓವೆಲ್ ಮೈದಾನ ಹಾಗೂ ಸಿದ್ದಲಿಂಗಪುರದಲ್ಲಿ ನಡೆಯಲಿವೆ ಎಂದು ರೈತ ದಸರೆ ಉಪಸಮಿತಿಯ ಉಪ ವಿಶೇಷಾಧಿಕಾರಿಯೂ ಆದ ಜಿಪಂ ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ರೈತ ದಸರಾ ಉಪಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ಕೋಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಸೆ.೩೦ರಂದು ಬೆಳಿಗ್ಗೆ ೯.೩೦ಕ್ಕೆ ಎತ್ತಿನ ಬಂಡಿಯ ಮೆರವಣಿಗೆ ಮೂಲಕ ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತ ದಸರಾಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಜೆ.ಕೆ.ಮೈದಾನದಲ್ಲಿನ ಕೃಷಿ ವಸ್ತು ಪ್ರದರ್ಶನವನ್ನು ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದು, ಪ್ರದರ್ಶನದಲ್ಲಿ ಕೃಷಿ, ರೇಷ್ಮೆ, ಮೀನುಗಾರಿಕೆ, ತೋಟಗಾರಿಕೆ, ಪಶುಪಾಲನಾ ಇಲಾಖೆಗಳ ೫೦ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.





