Mysore
24
haze

Social Media

ಬುಧವಾರ, 31 ಡಿಸೆಂಬರ್ 2025
Light
Dark

ಅಹವಾಲು ಆಲಿಸಲು ಮಹಾಪೌರರ ಪಾದಯಾತ್ರೆ

ದೇವಯ್ಯನಹುಂಡಿ ಸ್ಮಶಾನಕ್ಕೆ ಮೂಲ ಸೌಕರ್ಯ ಒದಗಿಸುವ ಭರವಸೆ

ಮೈಸೂರು: ಮಹಾಪೌರ ಶಿವಕುಮಾರ್ ಅಶೋಕಪುರಂ, ದೇವಯ್ಯನಹುಂಡಿಯಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿ. ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಬೇಸ್ ಪಿಯುಸಿ ಕಾಲೇಜಿನ ಬಳಿಯಿಂದ ಪಾದಯಾತ್ರೆ ಆರಂಭಿಸಿದ ಮಹಾಪೌರರು ಅಶೋಕಪುರಂ ೫ನೇ ಕ್ರಾಸ್‌ನಿಂದ ೧೦ನೇ ಕ್ರಾಸ್ ತನಕ ಸಂಚರಿಸಿದರು. ಈ ವೇಳೆ ಕಳೆದ ತಿಂಗಳು ಮಳೆಯಿಂದಾಗಿ ಮನೆಗಳು ಹಾನಿಗೀಡಾಗಿರುವ ಬಗ್ಗೆ ಮಹಾಪೌರರ ಗಮನ ಸೆಳೆದ ನಿವಾಸಿಗಳು ಕೂಡಲೇ ಮನೆ ಮಂಜೂರು ಮಾಡಿಸಿಕೊಡುವಂತೆ ಕೋರಿದರು.

ನಗರಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ ಅವರು ಮಾತನಾಡಿ, ಮಳೆಯಿಂದಾಗಿ ಅಶೋಕಪುರಂ ಅಡ್ಡರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಡಾಂಬರೀಕರಣಕ್ಕೆ ವಿಶೇಷ ಅನುದಾನ ಮಂಜೂರು ಮಾಡಿಕೊಡಬೇಕು ಮನವಿ ಮಾಡಿದರಲ್ಲದೆ, ವೀಳ್ಯದೆಲೆ ಬೆಳೆಗಾರರಲ್ಲಿ ಕೆಲವರಿಗೆ ಇನ್ನೂ ಪರ್ಯಾಯ ಜಾಗ ಮತ್ತು ಹಕ್ಕುಪತ್ರ ನೀಡಿಲ್ಲ ಎಂದು ಹೇಳಿದರು.

ದೇವಯ್ಯನಹುಂಡಿ, ಶ್ರೀರಾಂಪುರ ಎರಡನೇ ಹಂತದ ಸ್ಮಶಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮೇಯರ್, ಕಾಂಪೌಂಡ್, ನೀರಿನ ವ್ಯವಸ್ಥೆ, ತೆರೆದ ಶೆಲ್ಟರ್ ನಿರ್ಮಾಣ ಹಾಗೂ ಸ್ನಾನದ ಕೊಠಡಿಯನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.

ಈ ವೇಳೆ ದೇವಯ್ಯನಹುಂಡಿ ನಿವಾಸಿಗಳು, ಇಲ್ಲಿರುವ ಸ್ಮಶಾನದ ಜಾಗವನ್ನು ದೇವಯ್ಯನಹುಂಡಿಗೆ ಸೀಮಿತವೆಂದು ಜಿಲ್ಲಾಧಿಕಾರಿಗಳು ಜಾಗ ಮಂಜೂರು ಮಾಡಿದ್ದಾರೆ. ಮಹದೇವಪುರ, ರಮಾಬಾಯಿನಗರ, ಮುನಿಸ್ವಾಮಿನಗರದಿಂದ ಅಂತ್ಯಕ್ರಿಯೆ ಮಾಡಲು ಬರುವವರಿಗೆ ಅವಕಾಶ ನೀಡಬಾರದು ಎಂದು ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಮಹಾಪೌರರು ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಶ್ವಿನಿ ಕಲ್ಯಾಣ ಮಂಟಪದ ಎದುರು ಇರುವ ಖಾಲಿ ಜಾಗದಲ್ಲಿ ವ್ಯಾಯಾಮ ಶಾಲೆ ಮತ್ತು ಅಂಬೇಡ್ಕರ್ ಪುತ್ತಳಿಯನ್ನು ನಿರ್ಮಿಸಿಕೊಡುವಂತೆ ನಿವಾಸಿಗಳು ಮನವಿ ಸಲ್ಲಿಸಿದರು. ಆದರೆ, ಕೆಲವರು ಮುಖ್ಯರಸ್ತೆಯಾಗಿರುವ ಕಾರಣ ಉಳಿದ ಜಾಗದಲ್ಲಿ ರಸ್ತೆ ನಿರ್ಮಿಸಿದರೆ ಉತ್ತಮವಾಗಲಿದೆ ಎಂದರು. ಈ ವೇಳೆ ಮಹಾಪೌರರು ಸ್ಥಳೀಯ ನಗರಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ, ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಬಳಿಕ ಮಾನಂದವಾಡಿ, ಶ್ರೀರಾಂಪುರ ಕಡೆಗಳಲ್ಲಿ ನಡೆಯುತ್ತಿರುವ ರಸ್ತೆಗಳ ಕಾಮಗಾರಿಯನ್ನು ಪರಿಶೀಲಿಸಿದರು. ವಾಣಿವಿಲಾಸ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಅಭಿಯಂತರರಾದ ಸುವರ್ಣ, ವಲಯ ಸಹಾಯಕ ಆಯುಕ್ತ ನಾಗರಾಜು, ಸಹಾಯಕ ಕಂದಾಯ ಅಧಿಕಾರಿ ಬೆಟ್ಟಯ್ಯ, ಕಿರಿಯ ಅಭಿಯಂತರ ದಯಾನಂದ್, ವರ್ಕ್ ಇನ್‌ಸ್ಪೆಕ್ಟರ್‌ಗಳು, ಹೆಲ್ತ್ ಇನ್‌ಸ್ಪೆಕ್ಟರ್‌ಗಳು ಹಾಜರಿದ್ದರು.


ಅಧಿಕಾರಿಗೆ ತರಾಟೆ

ಮೈಸೂರು: ಅಶೋಕಪುರಂನ ರಸ್ತೆಬದಿಯಲ್ಲಿ ಚರಂಡಿ ಕಲ್ಲುಚಪ್ಪಡಿಗಳು, ರಸ್ತೆಯ ನಾಮಫಲಕಗಳು ಮುರಿದು ಬಿದ್ದಿರುವುದನ್ನು ಗಮನಿಸಿದ ಮಹಾಪೌರರು, ಚರಂಡಿಗಳು ಕುಸಿದು ನೀರು ಸರಾಗವಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಇಂತಹ ಸಣ್ಣ ಸಣ್ಣ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲವೇ? ನಾಮಫಲಕಗಳು ಸರ್ಕಾರದ ಆಸ್ತಿ ಎಂಬುದು ಗೊತ್ತಿಲ್ಲವೇ ಎಂದು ಸಂಬಂಧಪಟ್ಟ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅಶೋಕಪುರಂ ಬಡಾವಣೆಯಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲು ಕ್ರಿಯಾಯೋಜನೆ ರೂಪಿಸುವಂತೆ ಸೂಚಿಸಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!