ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯ ದೀಪಿಕಾ ಎಂಬ ಶಿಕ್ಷಕಿಯ ಶವ ಮೇಲುಕೋಟೆ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶವ ದೊರೆತ ಕೂಡಲೇ ತನಿಖೆ ಆರಂಭಿಸಿದ ಪೊಲೀಸರಿಗೆ ಹಲವು ಮಾಹಿತಿಗಳು ಲಭ್ಯವಾಗಿದ್ದು, 10 ಸೆಕೆಂಡ್‌ನ ವಿಡಿಯೊ ಸಹ ಲಭ್ಯವಾಗಿದೆ.
ಈ ವಿಡಿಯೊದಲ್ಲಿ ಇಬ್ಬರು ದುಷ್ಕರ್ಮಿಗಳು ದೀಪಿಕಾಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ, ಈ ವಿಡಿಯೊವನ್ನು ಪ್ರವಾಸಿಗರೊಬ್ಬರು ಚಿತ್ರಿಸಿ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ತ ದೀಪಿಕಾ ಪತಿ ಲೋಕೇಶ್ ಅದೇ ಗ್ರಾಮದ ನಿತೀಶ್ ಎಂಬಾತವ ವಿರುದ್ಧ ಆರೋಪ ಮಾಡಿದ್ದಾರೆ. ಆತ ತನ್ನನ್ನು ಅಣ್ಣ ಹಾಗೂ ತನ್ನ ಪತ್ನಿ ದೀಪಿಕಾಳನ್ನು ಅಕ್ಕ ಎಂದು ಮಾತನಾಡಿಸುತ್ತಿದ್ದ, ಅದು ಬಿಟ್ಟರೆ ಆತನಿಗೂ ತನ್ನ ಪತ್ನಿಗೂ ಯಾವುದೇ ಸ್ನೇಹವಿರಲಿಲ್ಲ ಎಂದೂ ಸಹ ಲೋಕೇಶ್ ತಿಳಿಸಿದ್ದಾರೆ.
ಶನಿವಾರ ( ಜನವರಿ 20 ) ಶಾಲೆ ಮುಗಿಸಿ ಬಂದ ನಂತರ ದೀಪಿಕಾ ಮೊಬೈಲ್‌ಗೆ ನಿತೀಶ್ ಮೊಬೈಲ್‌ನಿಂದ ಕರೆ ಬಂದಿದ್ದು ಪತ್ನಿ ದೀಪಿಕಾ ಶವ ಪತ್ತೆಯಾಗುತ್ತಿದ್ದಂತೆಯೇ ನಿತೀಶ್ ನಾಪತ್ತೆಯಾಗಿದ್ದಾನೆ, ಆತನೇ ಕೊಲೆಗಾರ ಎಂದು ಲೋಕೇಶ್ ಆರೋಪಿಸಿದ್ದಾರೆ. ಅತ್ತ ನಿತೀಶ್ ತನ್ನ ತಂದೆಗೆ ನನ್ನನ್ನು ಹುಡುಕಬೇಡಿ, ನಾನು ತಪ್ಪು ಮಾಡಿದ್ದೇನೆ, ಅಕ್ಕನ ಮದುವೆ ಮಾಡಿ ಎಂದು ಸಂದೇಶ ಕಳುಹಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ ಎನ್ನಲಾಗುತ್ತಿದೆ.