Mysore
26
haze

Social Media

ಗುರುವಾರ, 29 ಜನವರಿ 2026
Light
Dark

ಯುವಕರೇ, ನಿಯಮ ಪಾಲಿಸಿ ಜೀವ ಉಳಿಸಿ : ಎಸ್‌ಪಿ ಶೋಭಾರಾಣಿ ಮನವಿ

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ಅಧಿಕ್ಷಕಿ ಡಾ.ವಿ.ಜೆ.ಶೋಭಾರಾಣಿ

ಮಂಡ್ಯ : ಯುವಜನತೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದರಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ. ಶೋಭಾರಾಣಿ ಅವರು ಹೇಳಿದರು.

ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಂಚಾರ ಪೊಲೀಸ್ ಇಲಾಖೆಯ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ೨೦೨೬ರ ಅಂಗವಾಗಿ ಮಂಗಳವಾರ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಆಯೋಜಿಸಲಾಗಿದ್ದ ‘ಜಾಗೃತಿ ಜಾಥಾ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಅಪಘಾತಗಳು ಎರಡು ರೀತಿಯಲ್ಲಿ ನಡೆಯುತ್ತವೆ. ಅದರಲ್ಲಿ ರಸ್ತೆ ಸರಿಯಿಲ್ಲದೆ ಹಾಗೂ ಸಂಚಾರ ನಿಯಮ ಉಲ್ಲಂಘನೆಯಿಂದಾಗಿ. ಹೀಗಾಗಿ ರಸ್ತೆ ಸುರಕ್ಷತೆ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ದ್ವಿಚಕ್ರ ವಾಹನಗಳಲ್ಲಿ ಮೂರು ಮಂದಿ ಕುಳಿತು ಚಾಲನೆ ಮಾಡುವುದು, ವಾಹನ ಚಲಿಸುವಾಗ ಮೊಬೈಲ್ ಬಳಕೆ ಮಾಡುವುದು ಕಾನೂನು ಬಾಹಿರ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಪಘಾತಗಳು ನಡೆಯುತ್ತವೆ. ಪ್ರತಿ ವರ್ಷ ಸುಮಾರು ೫೦೦ರಿಂದ ೬೦೦ ಮಂದಿ ರಸ್ತೆ ಅಪಘಾತದಿಂದ ಸಾವನಪ್ಪುತ್ತಿರುವುದು ವಿಷಾದಕರ ಸಂಗತಿ. ಇದನ್ನು ತಡೆಗಟ್ಟಲು ಸುರಕ್ಷತೆಯಾಗಿ ವಾಹನ ಚಾಲನೆ ಮಾಡುವುದರ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮಾಡಬೇಕು. ಸಂಚಾರ ನಿಯಮಗಳ ಪಾಲನೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು, ವರ್ಷ ಪೂರ್ತಿ ರಸ್ತೆ ಸುರಕ್ಷತೆ ನಿಯಮ ಪಾಲನೆ ಮಾಡುವುದು ಕಡ್ಡಾಯ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ ಮಾತನಾಡಿ, ವಾಹನ ಚಾಲನೆಯಲ್ಲಿ ಯುವಜನತೆ ಸಾಕಷ್ಟು ಪ್ರಮಾಣದಲ್ಲಿ ಸಾವನ್ನಪ್ಪುತ್ತಿರುವುದು ವಿಷಾದಕಾರ ಸಂಗತಿ. ಯುವ ಜನತೆ ಹಾಗೂ ಸಾರ್ವಜನಿಕರು ಸಂಚಾರ ನಿಯಮ ಪಾಲನೆ ಮಾಡುವುದು ಕಡ್ಡಾಯ ಎಂದರು

ಜಾಥಾದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ. ತಿಮ್ಮಯ್ಯ. ಗಂಗಾಧರಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚೆಲುವಯ್ಯ, ಡಿವೈಎಸ್ಪಿ ಎಚ್. ಲಕ್ಷ್ಮಿನಾರಾಯಣ ಪ್ರಸಾದ್, ಮಂಡ್ಯ ಸಂಚಾರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಎಚ್.ಆರ್. ಸಿದ್ದಪ್ಪ ಭಾಗವಹಿಸಿದ್ದರು.

 

Tags:
error: Content is protected !!