ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?. ತಾಕತ್ ಇದ್ದರೆ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲ್ಲಲಿ ನೋಡೋಣ? ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಸವಾಲು ಹಾಕಿದರು.
ಮಂಡ್ಯದಿಂದ ಜಾ.ದಳ ಕಿತ್ತೊಗೆಯಿರಿ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ ಅವರು, ಜಾ.ದಳ ಓಡಿಸುವಂತೆ ಚಲುವರಾಯಸ್ವಾಮಿ ಕರೆ ಕೊಟ್ಟಿದ್ದಾರೆ, ದೇವರು ಒಳ್ಳೆಯದನ್ನು ಮಾಡಲಿ. ಜಾ.ದಳ ಪಕ್ಷ ಅವರು ಬೆಳೆದು ಹೋಗಿರುವ ಪಕ್ಷ. ಇಂಥವರನ್ನು ನೋಡಿಯೇ ಕೆಲವು ಗಾದೆಗಳನ್ನು ಹಿರಿಯರು ಮಾಡಿದ್ದಾರೆ. ನಾನು ಕಾಂಗ್ರೆಸ್‌ನಲ್ಲಿದ್ದೆ, ಯಾವತ್ತೂ ಆ ಪಕ್ಷವನ್ನು ಬೈದಿಲ್ಲ. ಆ ಪಕ್ಷದಲ್ಲಿನ ನಾಯಕರ ನಡವಳಿಕೆ ವಿರುದ್ಧ ಮಾತ್ರ ಬೈದಿದ್ದೇನೆ ಎಂದರು.
ಪಕ್ಷದಿಂದ ಬಂದು ಮಂತ್ರಿ ಆಗಿ ಆ ಪಕ್ಷವನ್ನೇ ಬೈದರೆ ಹೇಗೆ?. ಜಾ.ದಳ ಓಡಿಸುವುಕ್ಕೆ ನಿನಗೆ ತಾಕತ್ ಇದ್ಯಾ? ಈಗ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲ್ಲಿ ನೋಡೋಣ?. ಮಂತ್ರಿ ಸ್ಥಾನ, ದುಡ್ಡು, ಸರ್ಕಾರ ಇದೆ. ಚುನಾವಣೆ ಮಾಡೋಣ. 2028ಕ್ಕೆ ಚುನಾವಣೆಯಲ್ಲಿ ತೋರಿಸುತ್ತೇವೆ. ಜಾ.ದಳ ಇರುತ್ತಾ?, ಕಾಂಗ್ರೆಸ್ ಇರುತ್ತಾ ನೋಡೋಣಾ?. ಇಂಥವರಿಂದಲೇ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ ಎಂದು ಕಿಡಿಕಾರಿದರು.
ಲೂಟಿಕೋರರಿಂದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಮುಳುಗುತ್ತಿದೆ. ಸಚಿವರಿಗೆ ಅಧಿಕಾರದ ಅಮಲು ಎರಡೂ ಕಣ್ಣು ನೆತ್ತಿಮೇಲೆ ಹೋಗಿದೆ. ಮಗನ ಪ್ರೋಮೊಷನ್‌ಗೆ ಅಧಿಕಾರಿಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜನರು 2028ಕ್ಕೆ ಜಾ.ದಳ ಇರಬೇಕಾ? ಕಾಂಗ್ರೆಸ್ ಇರಬೇಕಾ ಎನ್ನುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮಾತನಾಡಬೇಕಾದರೆ ಎಚ್ಚರಿಕೆ ಇರಲಿ. ಹಣ, ಅಧಿಕಾರದ ಅಹಂಕಾರದಲ್ಲಿ ಹೆತ್ತ ತಾಯಿಗೆ, ಉಂಡ ಮನೆಗೆ ದ್ರೋಹ ಮಾಡಬಾರದು. ಜನ ಕೊಟ್ಟ ಅಧಿಕಾರವನ್ನು ಮಾರಿಕೊಂಡು ಬೇರೆ ಪಕ್ಷಕ್ಕೆ ಹೋದರೂ ಬುದ್ಧಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.




