ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟವು 93 ಅಡಿಗಿಂತಲೂ ಕಡಿಮೆಯಾಗಿದೆ. ಈ ವರ್ಷ ಮೇ ಆರಂಭದಲ್ಲೇ ಕಟ್ಟೆಯ ನೀರಿನ ಮಟ್ಟವು 93 ಅಡಿಗೆ ಕುಸಿದಿದೆ. ಆದರೆ, ಕುಡಿಯುವ ನೀರು, ಬೆಳೆಗಳಿಗೆ ಯಾವ ತೊಂದರೆಯೂ ಇಲ್ಲ. ಅಲ್ಲದೇ, ಕಳೆದ ಬಾರಿಗಿಂತ ಈ ಬಾರಿ 13 ಅಡಿಯಷ್ಟು ನೀರು ಹೆಚ್ಚಿರುವುದು ಸಮಾಧಾನಕರ ಸಂಗತಿ.
ಸದ್ಯದ ಮಟ್ಟಿಗೆ ಕುಡಿಯುವ ನೀರು ಹಾಗೂ ಬೆಳೆಗಳಿಗೆ ಯಾವ ತೊಂದರೆಯೂ ಇಲ್ಲ. ಸದ್ಯದಲ್ಲೇ ಮಳೆಯಾದರೆ ರೈತರಿಗೂ ಕೆಆರ್‌ಎಸ್ ನೀರಿನ ಅಭಾವವು ಬೀರುವುದಿಲ್ಲ.
ಪ್ರಸ್ತುತ ನೀರಿನ ಮಟ್ಟವು 93.10 ಅಡಿ ದಾಖಲಾಗಿದ್ದು, ಜಲಾಶಯದಲ್ಲಿ 17.879 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇಷ್ಟು ಪ್ರಮಾಣದಲ್ಲಿ ನೀರು ಈಗಲೂ ಇರುವುದರಿಂದ ಸದ್ಯಕ್ಕೆ ಕಾವೇರಿ ಕುಡಿಯುವ ನೀರಿಗಾಗಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಜತೆಗೆ, ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗಾಗಿ ನಾಲೆ ನೀರು ಸಿಗಲಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳೆಗಳ ರಕ್ಷಣೆಗಾಗಿ 4 ಕಟ್ಟುಗಳಲ್ಲಿ ನೀರು ಹರಿಸಲು ಕೆಆರ್‌ಎಸ್ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ 4 ಕಟ್ಟುಗಳಲ್ಲಿ ನೀರನ್ನು ಹರಿಸಲಾಗಿದೆ. ಕಳೆದ ಏ.29ರಂದು ರಾತ್ರಿ ಸ್ಥಗಿತಗೊಳಿಸಲಾಗಿದ್ದ ನೀರಿನ ಹರಿವನ್ನು ಶನಿವಾರ ರಾತ್ರಿಯಿಂದಲೇ ಮತ್ತೆ ಹರಿಸಲಾಗುತ್ತಿದೆ. ಅಂದರೆ ಇದು 5ನೇ ಕಟ್ಟು ನೀರಾಗಿದೆ.
ಕೃಷಿ ಬಳಕೆಗೆ 30 ಟಿಎಂಸಿ ಅಡಿ ಲಭ್ಯವಿರುವುದರಿಂದ ರೈತರಲ್ಲಿ ಆತಂಕವಿಲ್ಲ. ಸದ್ಯದಲ್ಲೇ ವಾಡಿಕೆ ಮಳೆ ಆರಂಭವಾಗಲಿದೆ ಎಂಬ ನಿರೀಕ್ಷೆಯೂ ರೈತರಲ್ಲಿದೆ.





