ಮಂಡ್ಯ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ವಿವಿಧ ಯೋಜನೆಗಳನ್ನು ಜಿಲ್ಲೆಗೆ ತಂದು ಅಭಿವೃದ್ಧಿ ಮಾಡಿದ್ದೇವೆ, ಈ ಅವಧಿಯಲ್ಲೇ ಜಿಲ್ಲೆಗೆ ಶಾಶ್ವತ ಯೋಜನೆ ನೀಡಲಾಗುವುದು ಎಂದು ಸಚಿವ ಎನ್ ಚಲುವರಾಯಸ್ವಾಮಿ ಹೇಳಿಕೆ ನೀಡಿದರು.
ನಗರದಲ್ಲಿ ನಡೆದ ಪ್ರಜಾಧ್ವನಿ 2 ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು. ಕೇಂದ್ರದಲ್ಲಿ ಆಡಳಿತ ನಡೆಸಿದ ಮೋದಿ ಹತ್ತು ವರ್ಷ ಸುಳ್ಳನ್ನೇ ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಡೀ ದೇಶವನ್ನು ಸುತ್ತಾಡಿ ದೇಶದ ಸಮಸ್ಯೆಗಳನ್ನು ಕಂಡು ಪರಿಹಾರ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ಆವರ ಕೈ ಬಲಪಡಿಸಬೇಕಿದೆ. ಆಗಾಗಿ ಜಿಲ್ಲೆಯ ಜನ ವೆಂಕಟರಮಣೇಗೌಡ ಅವರನ್ನು ಗೆಲ್ಲಿಸುವ ಮೂಲಕ ರಾಹುಲ್ ಗಾಂಧಿಗೆ ಶಕ್ತಿ ತುಂಬಬೇಕು ಎಂದರು.
ಅಧಿಕಾರದಲ್ಲಿದಾಗ ಮೇಕೆದಾಟ ಯೋಜನೆಯನ್ನು ಕೀಳಾಗಿ ಕಂಡವರು ಇಂದು ಮೇಕೆದಾಟಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿಗೆ ಟೀಕಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಜಿಲ್ಲೆಗೆ ನೂರಾರು ಕೋಟಿ ಅನುದಾನ ತಂದಿದ್ದೇವೆ. ಕೆಆರ್‌ಎಸ್‌ನ್ನು ವಿಶ್ವದರ್ಜೆಗೆ ಏರಿಸಿದ್ದೇವೆ. ನಾಲೆಗಳ ಆಧುನಿಕರಣ ಮಾಡಿದ್ದೇವೆ. ವಿಶ್ವವಿದ್ಯಾಲಯ ಘೋಷಿಸಿದ್ದೇವೆ ಎಂದು ಕಾಂಗ್ರೆಸ್‌ನ ಅಭಿವೃದ್ಧಿಯ ಬಗ್ಗೆ ವಿವರಿಸಿದರು.





