ಮಂಡ್ಯ/ಶ್ರೀರಂಗಪಟ್ಟಣ: ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮಂಡ್ಯ ಜಿಲ್ಲೆಯ ಮಗ. ಪ್ರಸಕ್ತ ಚುನಾವಣೆಯಲ್ಲಿ ಅವರು ಗೆದ್ದರೆ ಅಭಿವೃದ್ಧಿ ಕೆಲಸಗಳು ಚುರುಕುಗೊಳ್ಳಲಿದ್ದು, ಜಿಲ್ಲೆಯ ಪ್ರಗತಿ ದೃಷ್ಠಿಯಿಂದ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮನವಿ ಮಾಡಿದರು.
ತಾಲೂಕಿನ ತಡಗವಾಡಿ ಗ್ರಾಮದಲ್ಲಿ ಶನಿವಾರ ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಅವರನ್ನು ಅಭಿನಂದಿಸಿ ಮಾತನಾಡಿದರು.
ಜೆಡಿಎಸ್ ಪಕ್ಷದ ಕಾರ್ಯಕರ್ತರ ಕಷ್ಟಗಳಿಗೆ ಯಾರು ಸ್ಪಂದಿಸುತ್ತಿಲ್ಲ. ಜೆಡಿಎಸ್ ಮುಖಂಡರು ಸಾಮಾನ್ಯರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಆ ಪಕ್ಷದ ಕಾರ್ಯಕರ್ತರು ಅತಂತ್ರಸ್ಥಿತಿಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕ್ಷೇತ್ರದ ವಿವಿಧೆಡೆ 500 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದು, ಮುಂದೆ ಇನ್ನಷ್ಟು ಮಂದಿ ಕಾಂಗ್ರೆಸ್ ಸೇರಲಿದ್ದಾರೆ. ಪಕ್ಷಕ್ಕೆ ಬರುವವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲೇ ಹುಟ್ಟಿ ಬೆಳೆದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ಸರಳ ಸಜ್ಜನಿಕೆಗೆ ಹೆಸರಾದವರು. ಅವರು ಗೆದ್ದರೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದರು.
ತಡಗವಾಡಿ ಗ್ರಾಮದ ಸಿದ್ದೇಗೌಡ, ರಮೇಶ್, ಜಿತಿನ್, ಬಸವರಾಜು, ಮಂಜು, ಪುಟ್ಟು, ಸಂತೋಷ್, ನವೀನ್, ಚಿಕ್ಕದೈಗೌಡ, ಬಳ್ಳಾರಿಗೌಡ, ಶಂಕರ್, ಸುರೇಶ್, ದೇವೇಗೌಡ, ಕೆಂಪಲಿಂಗೇಗೌಡ, ಮಲ್ಲಪ್ಪ, ಚಂದ್ರಹಾಸ, ಪೂಜಾರಿ, ನಿಂಗಣ್ಣ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದವರು.