ಶ್ರೀರಂಗಪಟ್ಟಣ : ಗ್ರಾಮದ ದಲಿತರ ಜನಾಂಗಕ್ಕೆ ಸ್ಮಶಾನ ಜಾಗ ನಿಗಧಿ ಪಡಿಸುವಂತೆ ಆಗ್ರಹಿಸಿ ತಾಲೂಕಿನ ಕೊಡಿಯಾಲ ಗ್ರಾಮಸ್ಥರು ರಸ್ತೆ ಮಧ್ಯ ಶವಹೊತ್ತ ವಾಹನ ನಿಲ್ಲಿಸಿ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ದಲಿತ ಜನಾಂಗದ ಸಿದ್ದಯ್ಯ (55) ಎಂಬ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಶವ ಸಂಸ್ಕಾರ ಮಾಡಲು ಜಾಗವಿಲ್ಲ ಎಂದು ಗ್ರಾಮಸ್ಥರು ದೂರಿದರು.
ಗ್ರಾಮದ ಎಲ್ಲಾ ಜನಾಂಗಕ್ಕೂ ಪ್ರತ್ಯೇಕ ಸ್ಮಶಾಣವಿದ್ದು, ದಲಿತ ಜನಾಂಗದವರಿಗೆ ಸ್ಮಶಾಣ ಇಲ್ಲದಂತಾಗಿದೆ. ಈ ಹಿಂದೆ ಗ್ರಾಮದ ಸರ್ವೆ ನಂ 84 ರಲ್ಲಿ ಸ್ಮಶಾನ ಜಾಗ ನಿಗದಿಪಡಿಸಲಾಗಿತ್ತು. ಆದರೆ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿದ್ದು ನಮ್ಮ ಜನಾಂಗದವರು ಮೃತಪಟ್ಟಲ್ಲಿ ಸ್ಮಶಾಣ ಇಲ್ಲದಂತಾಗಿದೆ.
ಈ ಸಂಬಂಧ ಅಧಿಕಾರಿಗಳು ಇತ್ತ ಗಮನ ಹರಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸುವವರೆವಿಗೂ ಶವ ಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದರು.
ಈ ವೇಳೆ ಉಪತಹಸೀಲ್ದಾರ್ ದಿನೇಶ್ ಸ್ಥಳಕ್ಕೆ ಆಗಮಿಸಿ, ಮೇಲಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತಂದು ಸ್ಮಶಾನಕ್ಕೆ ಜಾಗ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆದು, ಶವ ಸಂಸ್ಕಾರ ನೆರವೇರಿಸಿದರು.





