ಮಂಡ್ಯ : ಮಾರ್ಚ್ 23ರಿಂದ ಏಪ್ರಿಲ್ 5ರವರೆಗೆ ವೈರಮುಡಿ ಬ್ರಹ್ಮೋತ್ಸವ 2026 ನಡೆಯಲಿದೆ. ಮಾರ್ಚ್ 28 ಶನಿವಾರದಂದು ವೈರಮುಡಿ ಕಿರೀಟಧಾರಣೆ ಮತ್ತು ಉತ್ಸವ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಶ್ರೀ ವೈರಮುಡಿ ಬ್ರಹ್ಮೋತ್ಸವ -2026ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾರ್ಚ್ ತಿಂಗಳಲ್ಲಿ ಉತ್ಸವ ನಡೆಯುತ್ತಿದೆ. ಆ ವೇಳೆ ಬೇಸಿಗೆ ಇರುವುದರಿಂದ ಬ್ರಹ್ಮೋತ್ಸವದ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ. ಹಾಲಿ ಇರುವ ನೀರಿನ ಟ್ಯಾಂಕರ್ ಗಳನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡಿ ಎಂದು ಸೂಚನೆ ನೀಡಿದರು.
ವೈರಮುಡಿ ಬ್ರಹ್ಮೋತ್ಸವ ನಡೆಯುವ ಸ್ಥಳದಲ್ಲಿ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಮಾಡಿ. ಈಗಾಗಲೇ ಜನಸಂದಣಿ ಹೊಂದುವ ಕಡೆ ಸಿ.ಸಿ.ಟಿ.ವಿ ವ್ಯವಸ್ಥೆ ಇದೆ. ಅಗತ್ಯ ಇರುವ ಕಡೆ ಹೆಚ್ಚುವರಿ ಸಿ.ಸಿ ಟಿ ವಿ ಅಳವಡಿಸಿ. ವಾಹನಗಳ ನಿಲುಗಡೆಗೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ. ಕೊಳದ ಬಳಿ ನೂರಿತ ಈಜು ಪಡೆ, ಅಗ್ನಿಶಾಮಕ ಸಿಬ್ಬಂದಿಗಳನ್ನು ನಿಯೋಜಿಸಿ ಎಂದು ನಿರ್ದೇಶನ ನೀಡಿದರು.
ಕ್ಷೇತ್ರದಲ್ಲಿ ಡ್ರೈನೇಜ್ ವ್ಯವಸ್ಥೆ ಕಲ್ಪಿಸಿ ಸ್ವಚ್ಚತೆ ಕಾಪಾಡಿ, ಆಂಬುಲೆನ್ಸ್, ಮೆಡಿಸಿನ್ ಗಳ ವ್ಯವಸ್ಥೆಯನ್ನು ಕಲ್ಪಿಸಿ. ಎಲ್ಲಾ ವಿದಧ ವೈದ್ಯರುಗಳು ಕಡ್ಡಾಯವಾಗಿ ನಿಗದಿ ಪಡಿಸಿದ ಸ್ಥಳದಲ್ಲಿ ಇರಬೇಕು. ಭಕ್ತಾದಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು. ಮೇಲುಕೋಟೆ ಕಲ್ಯಾಣ, ಬಸ್ ನಿಲ್ದಾಣ, ದೇವಾಲಯದ ಬಳಿ ಬಯೋ ಶೌಚಾಲಯಗಳನ್ನು ನಿರ್ಮಿಸಬೇಕು. ರಸ್ತೆಗಳ ದುರಸ್ತಿ ಮಾಡಿಸಿ. ವಿವಿಧ ತಾಲೂಕಿನಿಂದ ಬರುವ ಸಾರ್ವಜನಿಕರಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ. ಪಾರ್ಕಿಂಗ್ ನಿಂದ ದೇವಾಲಯಕ್ಕೆ ಭಕ್ತಾದಿಗಳು ಸಂಚಾರಿಸಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಹೇಳಿದರು.
ಮಂಗಳ ವಾದ್ಯ, ನಾದ ಸ್ವರ ಹಾಗೂ ವಿವಿಧ ಕಲಾ ತಂಡಗಳನ್ನು ವೈರಮುಡಿ ಬ್ರಹ್ಮೋತ್ಸವದಲ್ಲಿ ನಿಯೋಜಿಸಿ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ವೈರಮುಡಿ ಬ್ರಹ್ಮೋತ್ಸವ ಪ್ರಾರಂಭವಾಗಿ ಮುಗಿಯುವವರೆಗೂ ನಿರಂತರ ವಿದ್ಯುತ್ ಪೂರೈಕೆ ಮಾಡಿ. ಬೀದಿ ದೀಪಗಳ ದುರಸ್ತಿಗೊಳಿಸಿ ಎಂದು ಹೇಳಿದರು.
ಚೆಲುವನಾರಾಯಣ ಸ್ವಾಮಿ ದೇವಾಲಯ ಶ್ರೀ ಯೋಗ ನರಸಿಂಹ ಸ್ವಾಮಿ ದೇವಾಲಯ ಹಾಗೂ ದೇವಾಲಯದ ವ್ಯಾಪ್ತಿಯ ಪ್ರಮುಖ ಮಂಟಪ ಹಾಗೂ ಕಲ್ಯಾಣಿಯಲ್ಲಿ ವಿಶೇಷ ದಿಪಾಲಂಕಾರ ಹಾಗೂ ಹೂವಿನ ಅಲಂಕಾರ ವ್ಯವಸ್ಥೆ ಕಲ್ಪಿಸಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ ಅವರು ಮಾತನಾಡಿ, ವೈರಮುಡಿ ಬ್ರಹ್ಮೋತ್ಸವ ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಅತಿ ಮುಖ್ಯ. ಸದರಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ವೈರುಮುಡಿ ಬ್ರಹ್ಮೋತ್ಸವಕ್ಕೆ ಭೇಟಿ ನೀಡುವ ಗಣ್ಯರು ಮತ್ತು ಅತಿ ಗಣ್ಯರಿಗೆ ಸೂಕ್ತ ಶಿಷ್ಟಾಚಾರ ವ್ಯವಸ್ಥೆಯನ್ನು ಕಲ್ಪಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಟಿ.ಎನ್ ನರಸಿಂಹಮೂರ್ತಿ, ಮುಜರಾಯಿ ತಹಶೀಲ್ದಾರ್ ತಮ್ಮೆಗೌಡ, ಪಾಂಡವಪುರ ಇ ಓ ವೀಣಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.





