ನಾಗಮಂಗಲ/ಮಂಡ್ಯ: ನಾಗಮಂಗಲ ತಾಲೂಕಿನ ಮಾವಿನಕೆರೆ ಗ್ರಾಮದ ತೋಟದ ಮನೆಯಲ್ಲಿ ಹೆಣ್ಣು ಭ್ರೂಣ ಪತ್ತೆ ದಂಧೆ ನಡೆಯುತ್ತಿರುವಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಬ್ಬರು ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಪ್ರಮುಖ ಆರೋಪಿ ಅಭಿಷೇಕ್ ಪರಾರಿಯಾಗಿದ್ದಾನೆ.
ಗುರುವಾರ(ಆ.15)ತಡರಾತ್ರಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಮನೆಯಲ್ಲಿ ಅಬಾರ್ಷನ್ ಕಿಟ್, ಸ್ಕ್ಯಾನಿಂಗ್ ಮಷಿನ್ ಪತ್ತೆಯಾಗಿದೆ. ಇದೇ ವೇಳೆ ಸ್ಥಳದಲ್ಲಿ ಹಾಸನ ಮೂಲದ ಗರ್ಭಿಣಿ ಇದ್ದರು. ಭ್ರೂಣಲಿಂಗ ಪತ್ತೆಗಾಗಿ ಗರ್ಭಿಣಿಯನ್ನು ಕರೆತಂದಿದ್ದು, ಈಕೆ ಮೂರನೇ ಹೆಣ್ಣು ಭ್ರೂಣ ಆಬಾರ್ಷನ್‌ಗೆ ಬಂದಿದ್ದರು ಎನ್ನಲಾಗಿದೆ.
ದಾಳಿ ವೇಳೆ ಅಬಾರ್ಷನ್ ಕಿಟ್ ಹಾಗೂ ಸ್ಕ್ಯಾನಿಂಗ್ ಯಂತ್ರವನ್ನು ಸೀಜ್ ಮಾಡಿದ ಪೊಲೀಸರು, ಗರ್ಭಿಣಿಯ ಪತಿಯನ್ನು ಬಂಧಿಸಿದ್ದಾರೆ. ಪ್ರಮುಖ ಕಿಂಗ್‌ಪಿನ್ ಅಭಿಷೇಕ್ ಪರಾರಿಯಾಗಿದ್ದಾನೆ. ಇನ್ನು ದಂಧೆ ನಡೆಯುತ್ತಿದ್ದ ಮನೆ ಮಾಲೀಕ ಧನಂಜಯ್ ಆರೋಗ್ಯ ಇಲಾಖೆಯ ಗ್ರೂಪ್ ಡಿ ಸಿಬ್ಬಂದಿ ಎನ್ನಲಾಗಿದೆ.
ಜಿಲ್ಲೆಯಲ್ಲಿ ನಿಲ್ಲದ ಹೆಣ್ಣು ಭ್ರೂಣ ಪತ್ತೆ……
2023ರ ನವೆಂಬರ್‌ನಲ್ಲಿ ಜಿಲ್ಲೆಯ ಹಾಡ್ಯ-ಹುಳ್ಳೇನಹಳ್ಳಿಯ ಆಲೆಮನೆಯಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಕಾರ್ಯ ಬೆಳಕಿಗೆ ಬಂದಿತ್ತು. ಇಲ್ಲಿ ಪತ್ತೆಯಾದ ಹೆಣ್ಣು ಭ್ರೂಣವನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ಮಾಡುತ್ತಿದ್ದು ಗೊತ್ತಾಯಿತು. ಈ ಪ್ರಕರಣದ ಬೆನ್ನು ಹತ್ತಿದ ಬೆಂಗಳೂರು ಪೊಲೀಸರು ಹತ್ತು ಜನರನ್ನು ಬಂಧಿಸಿದ್ದರು. ಈ ಪ್ರಕರಣ ಇಡೀ ರಾಜ್ಯವೇ ಮಂಡ್ಯದತ್ತ ನೋಡುವ ಹಾಗೆ ಮಾಡಿತ್ತು.
ಈ ಪ್ರಕರಣ ಮಾಸುವೆ ಮುನ್ನವೆ ಪಾಂಡವಪುರದ ಆರೋಗ್ಯ ಇಲಾಖೆಯ ಕ್ವಾಟರ್ಸ್‌ನಲ್ಲೇ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದು ಆರೋಪದ ಮೇಳೆ ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್ ಚಾಲಕ ಸೇರಿದಂತೆ ನಾಲ್ಕ ಮಂದಿಯನ್ನು ಪೊಲೀಸರು ಮೇ ತಿಂಗಳಲ್ಲಿ ಬಂಧಿಸಿದ್ದರು.
ಇದೀಗ ಮತ್ತೆ ಜಿಲ್ಲಾ ಸಚಿವರ ತವರು ಕ್ಷೇತ್ರ ನಾಗಮಂಗಲದಲ್ಲಿಯೇ ದಂಧೆಯ ಜಾಲ ಪತ್ತೆಯಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆಗಳು ಏಷ್ಟೆಲ್ಲಾ ಕಾನೂನು ಜಾರಿ ಮಾಡಿದರೂ ಈ ದರಿದ್ರ ಕೆಟ್ಟ ಕೆಲಸ ಮಾತ್ರ ನಿಲ್ಲುತ್ತಿಲ್ಲ. ಇದು ಆರೋಗ್ಯ ಇಲಾಖೆಯ ವೈಫಲ್ಯವನ್ನ ಎತ್ತಿ ತೋರಿಸುತ್ತಿದೆ.