ಮಂಡ್ಯ: ಬಿಜೆಪಿಯಲ್ಲಿ ನನಗೆ ಉತ್ತಮ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ ಹಾಗಾಗಿ ನಾನು ಈ ಚುನಾವಣೆಯಿಂದ ಹಿಂದೆ ಸರಿದೆ. ಜೆಪಿ ನಡ್ಡಾ, ನಾಗಮೋಹನ್ ದಾಸ್ ಅವರ ನಿಮಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದ್ದಾರೆ. ಈ ಎಲ್ಲದಕ್ಕೂ ಕಾಲ ಉತ್ತರ ನೀಡುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜ್ಯ ರಾಜಕಾರಣದಲ್ಲಿ ಆಸಕ್ತಿಯಿಲ್ಲ. ಇಲ್ಲಿನ ಚುನಾವಣೆಗಾಗಿ ಇನ್ನೂ ನಾಲ್ಕು ವರ್ಷಗಳು ಕಾಯಬೇಕು. ಅದನ್ನು ಬಿಟ್ಟು ಕೇಂದ್ರ ರಾಜಕೀಯದ ಕಡೆ ಗಮನ ನೀಡಬೇಕು ಎಂದುಕೊಂಡಿದ್ದೇನೆ. ಸದ್ಯ ಈ ಬಾರಿಯ ಚುನಾವಣೆಯಲ್ಲಿ ಏನಾಗಲಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಯಾವಾಗ ಅಧಿಕಾರಕ್ಕೆ ಬರುತ್ತದೆ ಎಂದು ಕಾಯುತ್ತಿದ್ದೇನೆ. ಈಗಲೇ ಯಾವುದೇ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿಲ್ಲ ಎಂದು ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲಿದೆ ಎಂದರು. ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರಕ್ಕಾಗಿ ಯಾರು ನನಗೆ ಏನು ಹೇಳಿಲ್ಲ. ಹಾಗಾಗಿ ಇದರ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ ಎಂದರು.
ಇನ್ನು ತಮ್ಮ ಪುತ್ರ ಅಭಿಷೇಕ್ ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿ, ನಾನು ರಾಜಕೀಯದಲ್ಲಿ ಇರುವವರೆಗೂ ಅಭಿ ಚುನಾವಣೆಗೆ ಬರುವುದಿಲ್ಲ. ಅಭಿಷೇಕ್ ಕೂಡಾ ಇದೇ ಮಾತು ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.





