ಮಂಡ್ಯ : ರಾಜ್ಯದಲ್ಲಿ ಯೂರಿಯಾ ರಾಸಾಯನಿಕ ಗೊಬ್ಬರ ನೂರಕ್ಕೆ ನೂರರಷ್ಟು ದಾಸ್ತಾನು ಇಲ್ಲ. ಇರಾನ್‌ನಿಂದ ಆಮದು ಆಗುತ್ತಿಲ್ಲ. ಚೀನಾ ರಫ್ತು ನಿಲ್ಲಿಸಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಪ್ರಿಲ್‌ನಿಂದ ಜುಲೈವರೆಗೆ ೬ ಲಕ್ಷದ ೮೦ ಸಾವಿರ ಮೆಟ್ರಿಕ್ ಟನ್ ಬೇಡಿಕೆ ಇತ್ತು. ಈಗಾಗಲೇ ೬ ಲಕ್ಷದ ೬೦ ಸಾವಿರ ಮೆಟ್ರಿಕ್ ಟನ್ ಮಾರಾಟ ಮಾಡಿದ್ದೇವೆ. ೧ ಲಕ್ಷದ ೯೪ ಸಾವಿರ ಮೆಟ್ರಿಕ್ ಟನ್ ಮಾತ್ರ ಸದ್ಯಕ್ಕೆ ದಾಸ್ತಾನು ಇದೆ. ಹಾವೇರಿಯಲ್ಲಿ ೩೬ ಸಾವಿರ ಮೆಟ್ರಿಕ್ ಟನ್ ಬೇಡಿಕೆ ಇತ್ತು. ೪೦ ಸಾವಿರ ಮೆಟ್ರಿಕ್ ಟನ್ ಕೊಟ್ಟಿದ್ದೇವೆ. ರೈತರು ಸ್ಪಲ್ಪ ಒತ್ತಡ ತರುತ್ತಿದ್ದಾರೆ. ಜುಲೈನಲ್ಲೇ ಅಣೆಕಟ್ಟೆಗಳಿಂದ ನೀರು ಬಿಟ್ಟಿರುವುದರಿಂದ ಒಂದು ತಿಂಗಳು ಮುಂಚಿತವಾಗಿ ಕೃಷಿ ಚಟುವಟಿಕೆ ಆರಂಭವಾದ ಹಿನ್ನೆಲೆಯಲ್ಲಿ ಸಮಸ್ಯೆ ಆಗಿದೆ. ಕೇಂದ್ರದಿಂದ ಯೂರಿಯಾ, ಡಿಎಪಿ ಕಡಿಮೆ ಬರಲಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ರೈತರು ಗೊಬ್ಬರ ಖರೀದಿಗೆ ಮುಂದಾಗಿದ್ದಾರೆ. ಆದರೆ, ಆತಂಕಪಡುವ ಅವಶ್ಯವಿಲ್ಲ. ರೈತರಿಗೆ ಸಮರ್ಪಕವಾಗಿ ಗೊಬ್ಬರ ಕೊಡುತ್ತೇವೆ. ರಾಜ್ಯ ಸರ್ಕಾರ ರೈತರಿಗಾಗಿ ರಸಗೊಬ್ಬರ ಸರಬರಾಜು ಮಾಡಲಿದೆ. ಸಹಕಾರ ಕೊಡಿ, ಯಾವುದೇ ತೊಂದರೆ ಇಲ್ಲ ಎಂದು ಮನವಿ ಮಾಡಿದರು.
ಎರಡು ದಿನಗಳಲ್ಲಿ ಎಲ್ಲವೂ ಹೊರಗೆ ಬರಲಿದೆ:
ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದು ಏನೋ ಇದೆ, ಸ್ಪಲ್ಪ ದಿನ ಹೊಗೆ ಆಡುತ್ತದೆ. ಎರಡು ದಿನ ಆದ ಮೇಲೆ ಎಲ್ಲವೂ ಹೊರಗೆ ಬರುತ್ತದೆ ಎಂದರು.
ಶಾಸಕರಿಗೆ ಅನುದಾನ ತಾರತಮ್ಯ ವಿಚಾರಕ್ಕೆ ಸಂಬಂಽಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲ ಶಾಸಕರಿಗೂ ತಲಾ ೫೦ ಕೋಟಿ ರೂ. ಕೊಟ್ಟಿದ್ದಾರೆ. ಕಳೆದ ಬಜೆಟ್‌ನಲ್ಲಿ ಕೊಟ್ಟ ಭರವಸೆಯನ್ನು ಈಗ ಅನುಷ್ಠಾನ ಮಾಡಿದ್ದಾರೆ. ಬಿಜೆಪಿಯವರಿಗೂ ೨೫ ಕೋಟಿ ರೂ. ಕೊಟ್ಟಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಇದ್ದಾಗ ನಮಗೆ ಕೊಟ್ಟಿರಲಿಲ್ಲ. ನಾವು ಅಷ್ಟಾದರೂ ಕೊಟ್ಟಿದ್ದೇವೆ ಎಂದರು.
ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸಬೇಕು
ಜಿಎಸ್‌ಟಿ ನಿಗದಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೆರಿಗೆ ಹಾಕಿದರೆ ಸಮಸ್ಯೆ ಆಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಬಿಜೆಪಿಯವರು ಮನುಷ್ಯರಲ್ಲ. ಅವರ ಬಗ್ಗೆ ಹೇಳಬೇಡಿ. ಅವರಿಗೆ ಏನು ಹೇಳಬೇಕು ಎಂಬುದೇ ಗೊತ್ತಿಲ್ಲ. ಬಿಜೆಪಿಗೆ ಹಿಂದೆ ಮಾಡಿರುವ ಸಾಧನೆ ಇಲ್ಲ, ಮುಂದೆ ಗುರಿ ಇಲ್ಲ. ಸುಮ್ಮನೆ ಏನೋ ಹೇಳುತ್ತಾರೆ. ಜಿಎಸ್‌ಟಿ ಸಂಗ್ರಹ ಮಾಡಲು ರಾಜ್ಯದ ಯೂನಿಟ್ ಇದೆ. ಅವರು ಸಂಗ್ರಹ ಮಾಡುತ್ತಾರೆ. ಅದನ್ನು ತೆಗೆಯುವ ಅಽಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಈ ಹಿನ್ನೆಲೆಯಲ್ಲಿ ಕೇಂದ್ರ ಆದೇಶ ಕೊಟ್ಟಿದೆ, ರಾಜ್ಯದ ಅಽಕಾರಿಗಳು ಯೂನಿಟ್ ಪಾಲನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಆಕಾಶ ಇದ್ದಂತೆ. ರಾಜ್ಯ ಸರ್ಕಾರ ಹತ್ತಿರ ಇದೆ ಅಷ್ಟೆ ಎಂದರು.
ಸಮಸ್ಯೆ ಬಗೆಹರಿಸುತ್ತೇವೆ:
ಮಂಡ್ಯ ತಾಲ್ಲೂಕು ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧ ನಡೆಯುತ್ತಿರುವ ಬಗ್ಗೆ ಮಾತನಾಡಿದ ಸಚಿವರು, ಇದರ ಬಗ್ಗೆ ಜಿಲ್ಲಾಧಿಕಾರಿ ಅವರು ನನ್ನ ಗಮನಕ್ಕೆ ತಂದಿದ್ದಾರೆ. ಎರಡೂ ಕಡೆಯವರ ಜತೆ ಮಾತನಾಡಲು ಸೂಚನೆ ಕೊಟ್ಟಿದ್ದೇನೆ. ಇದನ್ನು ಯಾರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು ಎಂದು ಸಚಿವರು ಹೇಳಿದರು.




