ಮಂಡ್ಯ : ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ ಎನ್ನುವ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳಿ ಬರುವ ಸಂದೇಶ ಕೊಟ್ಟಿದ್ದಾರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ.
ರಾಜ್ಯ ರಾಜಕಾರಣಕ್ಕೆ ವಾಪಸ್ ಬರುತ್ತೀರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ರಾಜ್ಯವೇ ನನ್ನ ಪರಿಮಿತಿ. ಜನರು ಅಪೇಕ್ಷೆ ಮಾಡಿದ ಕಡೆ ಸ್ಪರ್ಧೆ ಮಾಡ್ತೇನೆ. ಮಂಡ್ಯದಿಂದ ಲೋಕಸಭೆ ಚುನಾವಣೆಗೆ ನಿಲ್ಲುವ ಉದ್ದೇಶ ಇರಲಿಲ್ಲ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ನಿಲ್ಲಿಸಬೇಕು ಎಂದುಕೊಂಡಿದ್ದೆ. ಅವತ್ತು ಅನಿವಾರ್ಯವಾಗಿ ನಾನು ಚುನಾವಣೆಗೆ ನಿಂತೆ. ಕೇಂದ್ರ ಮಂತ್ರಿ ಆಗ್ತೀನಿ ಎಂದು ನನಗೆ ಗೊತ್ತಿರಲಿಲ್ಲ ಎಂದರು.
ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋದವರು ಜಾ.ದಳದ ಕಥೆ ಮುಗಿಯಿತು ಎಂದರು. ಆದರೆ, ನಮ್ಮ ಪಕ್ಷ ಯಾವ ರೀತಿಯಲ್ಲಿ ಗಟ್ಟಿಯಾಗುತ್ತಿದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಕೆಲವರಿಗೆ ಜಾ.ದಳ ಪಕ್ಷದ್ದೇ ಯೋಚನೆ. ಜಾ.ದಳ ಮುಗಿಸಬೇಕು ಎಂಬುದೇ ಅವರ ಚಿಂತೆ ಎಂದು ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಲೇವಡಿ ಮಾಡಿದರು.
ಕೇಂದ್ರದೊಂದಿಗೆ ರಾಜ್ಯ ಸರ್ಕಾರ ವಿಶ್ವಾಸದಲ್ಲಿಲ್ಲ
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಲವಾರು ಅಕ್ರಮಗಳು ನಡೆದಿವೆ. ಕಾನೂನು ಬಾಹಿರ ನಿರ್ಧಾರಗಳ ಬಗ್ಗೆ ರಾಜ್ಯಪಾಲರು ಕ್ರಮ ಕೈಗೊಳ್ಳುವ ಅವಕಾಶ ಇದ್ದರೂ ರಾಜ್ಯಪಾಲರು ಬೇರೆ ರಾಜ್ಯಗಳ ರಾಜ್ಯಪಾಲರ ರೀತಿ ನಮ್ಮ ಸರ್ಕಾರದ ಜತೆ ಸಂಘರ್ಷ ಮಾಡಲಿಲ್ಲ. ಅದನ್ನು ಈ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಕೇಂದ್ರ ಸರ್ಕಾರದ ಜತೆ ರಾಜ್ಯ ಸರ್ಕಾರ ವಿಶ್ವಾಸದಲ್ಲಿಲ್ಲ. ಕೇಂದ್ರದ ಅನುದಾನದ ಬಗ್ಗೆ ರಾಜ್ಯ ಸರ್ಕಾರ ಪಾರದರ್ಶಕವಾಗಿ ಮಾಡಿಕೊಂಡಿಲ್ಲ. ಇವರ ತಪ್ಪಿನಿಂದ ಕೆಲ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ವಾಪಸ್ ಹೋಗಿವೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.





