ಮಂಡ್ಯ: ಯಾವುದೇ ಅಭಿವೃದ್ಧಿ ಯೋಜನೆಯು ಪರಿಸರವನ್ನು ಬಲಿಗೊಟ್ಟು ರೂಪಿತವಾಗಬಾರದು. ಉದ್ದೇಶಿತ ಮೇಕೆದಾಟು ಯೋಜನೆಯಿಂದ ಕಾವೇರಿ ವನ್ಯಜೀವಿ ವಲಯದ ಸುಮಾರು 4,800 ಎಕರೆ ಅರಣ್ಯ ಭೂಮಿ ಮುಳುಗಡೆಯಾಗಲಿದ್ದು, 12 ಲಕ್ಷಕ್ಕೂ ಅಧಿಕ ಮರಗಳು ನಾಶವಾಗಲಿವೆ. ಇದು ಇಡೀ ಪರಿಸರ ವ್ಯವಸ್ಥೆಗೆ ತುಂಬಲಾರದ ನಷ್ಟವಾಗಲಿದೆ ಎಂದು ಖ್ಯಾತ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಎಚ್ಚರಿಸಿದರು.
ನಗರದ ಗಾಂಧಿ ಭವನದಲ್ಲಿ ಕನ್ನಡ ಕರ್ನಾಟಕ ಫೌಂಡೇಶನ್, ಎಂಪ್ಟಿ ಪಾಕೆಟ್ ಡ್ರೀಮ್ಸ್ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಆಪ್ತ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮನಗರದ ಕನಕಪುರ ಬಳಿ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಅಣೆಕಟ್ಟಿನ ಬದಲಿಗೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಅಣೆಕಟ್ಟು ನಿರ್ಮಿಸುವುದು ಪರಿಸರ ದೃಷ್ಟಿಯಿಂದ ಸೂಕ್ತ. ಅಲ್ಲಿರುವ 8 ಮಿನಿ ಜಲವಿದ್ಯುತ್ ಘಟಕಗಳ ಹಿತಾಸಕ್ತಿ ಕಾಪಾಡುವ ಸಲುವಾಗಿ ಜನಪ್ರತಿನಿಧಿಗಳು ಈ ಪರ್ಯಾಯ ಮಾರ್ಗದ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ವಿಷಾದಿಸಿದರು.
ಪರಿಸರ ಹೋರಾಟದ ಸ್ವರೂಪ ಬದಲಾಗಬೇಕಿದೆ. ಬೀದಿಗಿಳಿದು ಘೋಷಣೆ ಕೂಗುವುದು ಮಾತ್ರ ಸಂರಕ್ಷಣೆಯಲ್ಲ. ವನ್ಯಜೀವಿ ಸಂರಕ್ಷಕರು ಹಾನಿಯ ಬಗ್ಗೆ ನಿಖರ ದಾಖಲೆಗಳನ್ನು ಸಿದ್ಧಪಡಿಸಿ ರಾಜಕಾರಣಿಗಳಿಗೆ ಮನವರಿಕೆ ಮಾಡಿಕೊಟ್ಟಾಗ ಮಾತ್ರ ಶಾಶ್ವತ ಬದಲಾವಣೆ ಸಾಧ್ಯವಾಗಲಿದೆ. ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಮತ್ತು ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಲು ಈ ಹಾದಿಯೇ ನಮಗೆ ಯಶಸ್ಸು ತಂದುಕೊಟ್ಟಿದೆ ಎಂದು ವಿವರಿಸಿದರು.
ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಐದು ಜಿಲ್ಲೆಗಳಲ್ಲಿ ಶೇ.70ರಷ್ಟು ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿವೆ. ಆವಾಸಸ್ಥಾನಗಳ ನಾಶ ಮತ್ತು ಚಿರತೆಗಳ ಅವೈಜ್ಞಾನಿಕ ಸ್ಥಳಾಂತರವೇ ಇದಕ್ಕೆ ಮುಖ್ಯ ಕಾರಣ. ಇನ್ನು ಇಂದಿನ ಸಫಾರಿ ಸಂಸ್ಕೃತಿಯು ಕೇವಲ ಮೋಜು-ಮಸ್ತಿಯಾಗಿ ಬದಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ಗಿಟ್ಟಿಸಲು ಹುಲಿ-ಚಿರತೆ ನೋಡುವ ಬದಲು, ನಮ್ಮ ಸುತ್ತಲ ಪ್ರಕೃತಿಯ ಕ್ರಿಮಿಕೀಟ, ಪಕ್ಷಿ ಮತ್ತು ಮರಗಳ ವೈವಿಧ್ಯತೆಯನ್ನು ಅರಿಯುವುದೇ ನಿಜವಾದ ಸಫಾರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಂಜಯ್ ಗುಬ್ಬಿ ಅವರ ಮುಂದಿನ ಕೃತಿಗಳಾದ ‘ಕಾಡಿನೊಳಗೊಂದು ಮನೆಯ ಮಾಡಿ’ ಮತ್ತು ‘ಕಾಡಿನ ಗೆಳೆಯರ ಕಾಡುವ ಕತೆಗಳು’ ಎಂಬ ಹೊಸ ಪುಸ್ತಕಗಳ ಬಗ್ಗೆ ಮಾಹಿತಿ ನೀಡಲಾಯಿತು.
ಲೇಖಕ ಹಾಗೂ ಕಿರುಚಿತ್ರ ನಿರ್ದೇಶಕ ವಿನಯ್ ಕುಮಾರ್ ಎಂ.ಜಿ. ಸಂವಾದವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಸಿಎಫ್ ಮಹದೇವಸ್ವಾಮಿ, ಡಿಎಸ್ಎಸ್ ಹಿರಿಯ ಮುಖಂಡ ಪ್ರೊ. ಚಂದ್ರಶೇಖರನ್, ಸಹಾಯಕ ಸರ್ಕಾರಿ ಅಭಿಯೋಜಕಿ ರತಿಕುಮಾರಿ, ಪತ್ರಕರ್ತ ಸಿದ್ದು ಆರ್.ಜಿ. ಹಳ್ಳಿ ಸೇರಿದಂತೆ ವಿವಿಧ ವಲಯದ ಗಣ್ಯರು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು.





