ಮಂಡ್ಯ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಏಪ್ರಿಲ್ 16 ಮತ್ತು 17ರಂದು ನಡೆಯುವ ಸಿ.ಇ.ಟಿ ಪರೀಕ್ಷೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಬಿ ಸಿ ಶಿವಾನಂದ ಮೂರ್ತಿ ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಿ. ಇ. ಟಿ – 2025ರ ಪರೀಕ್ಷಾ ಪೂರ್ವ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಪ್ರಿಲ್ 16 ಮತ್ತು 17 ರಂದು ನಡೆಯಲಿರುವ ಸಿ.ಇ.ಟಿ ಪರೀಕ್ಷೆಯಲ್ಲಿ 6,401 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 15 ಪರೀಕ್ಷಾ ಕೇಂದ್ರಗಳಿದ್ದು, ಮಂಡ್ಯ ತಾಲೂಕಿನಲ್ಲಿ 12 ಹಾಗೂ ಕೆ ಆರ್ ಪೇಟೆ ತಾಲೂಕಿನಲ್ಲಿ 3 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನ ಪತ್ರಿಕೆಯನ್ನು ಕೊಂಡೊಯ್ಯಲು ತಹಶೀಲ್ದಾರ್ ಬಿ.ಇ.ಒ ಹಾಗೂ ಪ್ರಾಂಶುಪಾಲರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ರಚಿಸಲಾಗಿದೆ.
ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪರೀಕ್ಷೆ ಕೇಂದ್ರದ ಸುತ್ತ ಸೆಕ್ಷನ್ 144 ಜಾರಿಗೊಳಿಸಿ ನಿಷೇಧಾಜ್ಞೆ ಹೊರಡಿಸಲಾಗುವುದು. ಯಾವುದೇ ಖಾಸಗಿ ವ್ಯಕ್ತಿಗಳು 200 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುವಂತಿಲ್ಲ ಹಾಗೂ ಸುತ್ತಮುತ್ತಲು ಯಾವುದೇ ಜೆರಾಕ್ಸ್ ಅಂಗಡಿಗಳು ತೆರೆಯುವಂತಿಲ್ಲ ಎಂದು ಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.
ಸಿ.ಇ.ಟಿ ಪರೀಕ್ಷೆ ಬರೆಯಲು ಬರುವ ಮಕ್ಕಳಿಗೆ ಕುಡಿಯುವ ನೀರು, ಸೂಕ್ತ ಆಸನಗಳು, ಕೊಠಡಿಯಲ್ಲಿ ಗಡಿಯಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು, ಪರೀಕ್ಷಾ ಕೊಠಡಿಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
24 ವಿದ್ಯಾರ್ಥಿಗಳಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ, ಪ್ರತಿ ಪರೀಕ್ಷಾ ಕೇಂದ್ರಗಳಿಗೂ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು, ವಿದ್ಯುತ್ ವ್ಯತ್ಯಯ ಉಂಟಾಗದಂತೆ ಪ್ರತಿ ಕೇಂದ್ರಕ್ಕೂ ಇಬ್ಬರು ಲೈನ್ ಮ್ಯಾನ್ ನಿಯೋಜಿಸಲಾಗುವುದು, ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಲೋಪಗಳಾಗದಂತೆ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಿ.ಇ.ಟಿ ಪರೀಕ್ಷೆ ನಡೆಯುವ 15 ಕೇಂದ್ರಗಳಲ್ಲೂ ಸಿ.ಸಿ.ಟಿ.ವಿ ಕಡ್ಡಾಯ, ಎಲ್ಲಾ ಕೊಠಡಿಯ ವಿಡಿಯೋಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರದರ್ಶನಗೊಳ್ಳುತ್ತಿರುತ್ತವೆ. ಆದ್ದರಿಂದ ಕೊಠಡಿ ಮೇಲ್ವಿಚಾರಕರು ಜಾಗೃತೆಯಿಂದ ಕಾರ್ಯನಿರ್ವಹಿಸಿ ಎಂದು ಎಚ್ಚರಿಕೆ ನೀಡಿದರು.





