Mysore
29
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಡೆಂಗ್ಯೂ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಹಿಸಿ: ಡಾ.ಕುಮಾರ

dengue

ಮಂಡ್ಯ : ಡೆಂಗ್ಯೂ ಜ್ವರ ಒಂದು ಮಾರಕ ಖಾಯಿಲೆ, ಈ ಮಹಾಮಾರಿ ಡೆಂಗ್ಯೂ ಬಾರದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಜಾಗೃತಿ ಮೂಡಿಸಿದರು.

ಇಂದು (ಮೇ.16) ರಂದು ನಗರದ ಸಂಜಯ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಡೆಂಗ್ಯೂ ಎಂಬ ಮಾರಕ ರೋಗವನ್ನು ಹೋಗಲಾಡಿಸುವ ಮೊದಲ ಔಷಧಿ ಎಂದರೆ ಅದು ಅರಿವು, ಸಾರ್ವಜನಿಕರು ಡೆಂಗ್ಯೂ ಜ್ವರ ತಡೆಗಟ್ಟುವ ಬಗ್ಗೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದರು.

ಸಾರ್ವಜನಿಕರು ತಾವು ವಾಸಿಸುವ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡುವುದು ಹಾಗೂ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯ, ನಮ್ಮೆಲ್ಲರ ಆದ್ಯ ಕರ್ತವ್ಯ, ಡೆಂಗ್ಯೂ ಬಂದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಡೆಂಗ್ಯೂ ಬಾರದಂತೆ ನೋಡಿಕೊಳ್ಳುವುದು ಅತೀ ಮುಖ್ಯ ಎಂದರು.

ಡೆಂಗ್ಯೂ ಕುರಿತು ನಾವೆಲ್ಲರೂ ಜಾಗೃತರಾದರೆ ಡೆಂಗ್ಯೂ ಎಂಬ ಮಹಾಮಾರಿಯನ್ನು ಹೋಗಲಾಡಿಸಬಹುದು, ಮಳೆಗಾಲ ಆರಂಭವಾಗುವುದರಿಂದ ಚರಂಡಿ ಹಾಗೂ ಅರ್ಧಕ್ಕೆ ನಿಂತು ಹೋದ ಕಟ್ಟಡಗಳಲ್ಲಿ ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ, ಸಾರ್ವಜನಿಕರು ತಮ್ಮ ತಮ್ಮ ಮನೆಗಳ ಮುಂಭಾಗದಲ್ಲಿ ಇರುವ ಚರಂಡಿಗಳನ್ನು ಸ್ವಚ್ಚಗೊಳಿಸಿ, ತಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸ್ವಯಂ ಪ್ರೇರಿತರಾಗಿ ಸ್ವಚ್ಚಗೊಳಿಸುವುದರಿಂದ ಡೆಂಗ್ಯೂ ಜ್ವರವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್ ಮಾತನಾಡಿ, ಈ ಬಾರಿ ಡೆಂಗ್ಯೂ ಜ್ವರದ ಘೋಷ ವಾಕ್ಯ “ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ”, ಮೊದಲು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಎಲ್ಲಾದರೂ ಸೊಳ್ಳೆ ಉತ್ಪತ್ತಿಯಾಗುವಂತಹ ಸ್ಥಳಗಳು ಇದ್ದಾರೆ ಅದನ್ನು ಗುರುತಿಸಿ ಸ್ವಚ್ಛಗೊಳಿಸಿ, ನೀರು ನಿಲ್ಲದಂತೆ ಸ್ವಚ್ಚ ಗೊಳಿಸಿದ ಸ್ಥಳಗಳನ್ನು ಮುಚ್ಚಿಡಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಕಾಂತರಾಜು, ಡಾ. ಬೆಟ್ಟಸ್ವಾಮಿ,ಎಮ್.ಎನ್. ಆಶಾಲತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂಜಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣ
ರಾಷ್ಟ್ರೀಯ ಡೆಂಗ್ಯೂ ಜ್ವರ ದಿನಾಚರಣೆ ಪ್ರಯುಕ್ತ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರದ ಸಂಜಯ್ ವೃತ್ತದಲ್ಲಿ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ನಂತರ ಎಸ್.ಡಿ. ಜಯರಾಮ್ ಪ್ಯಾರಮೆಡಿಕಲ್ ವಿಜ್ಞಾನ ಸಂಸ್ಥೆ ಮತ್ತು ಸದ್ವಿದ್ಯಾ ಪ್ಯಾರಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಂಜಯ್ ವೃತ್ತದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಕಚೇರಿಯವರೆಗೂ ಜಾಥಾ ನಡೆಯಿತು,

ವಿದ್ಯಾರ್ಥಿನಿಯರು ‘ಕೀಟ ಚಿಕ್ಕದು ಕಾಟ ದೊಡ್ಡದು’, ‘ವಿದ್ಯೆ ಕದಿಯಲಾಗದ ಸಂಪತ್ತು ಆರೋಗ್ಯ ಕೊಳ್ಳಲಾಗದ ಸಂಪತ್ತು’, ‘ಸ್ವಯಂ ರಕ್ಷಣಾ ವಿಧಾನವನ್ನು ಬಳಸಿ ಸೊಳ್ಳೆಗಳನ್ನು ನಿಯಂತ್ರಿಸಿ’ ಎಂಬ ಜಾಗೃತಿ ಫಲಕಗಳನ್ನು ಜಾಥಾದಲ್ಲಿ ಪ್ರದರ್ಶನ ಮಾಡಿದರು.

Tags:
error: Content is protected !!