ಮಂಡ್ಯ : ಗ್ರಾಮ ಪಂಚಾಯತ್ ಗಳು ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಂಕಲ್ಪ ಮಾಡುವ ಮೂಲಕ ಗ್ರಾಮ ಪಂಚಾಯತ್ ಗಳ ಸಮಗ್ರ ಅಭಿವೃದ್ಧಿ, ಕಾರ್ಯಕ್ಷಮತೆ ಹಾಗೂ ಪ್ರಗತಿಯನ್ನು ಉತ್ತಮಗೊಳಿಸಬೇಕು ಎಂದು ಗ್ರಾ.ಪಂ.ಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ಕರೆ ನೀಡಿದರು.
ಗುರುವಾರ ಮಂಡ್ಯ ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಪಂಚಾಯತ್ ಪ್ರಗತಿ ಸೂಚ್ಯಂಕ 2.0 ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ ಸೇರಿದಂತೆ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಗ್ರಾಮ ಪಂಚಾಯತ್ ಗಳನ್ನು ಬಡತನ ಮುಕ್ತ, ಆರೋಗ್ಯವಂತ, ಮಹಿಳಾ ಸ್ನೇಹಿ, ಮಕ್ಕಳ ಸ್ನೇಹಿ, ಸಾಮಾಜಿಕ ಸುರಕ್ಷಾ ಹಾಗೂ ಉತ್ತಮ ಮೂಲಭೂತ ಸೌಕರ್ಯ ಹೊಂದಿರುವ ಗ್ರಾಮ ಪಂಚಾಯತ್ ಗಳನ್ನಾಗಿಸಲು ಶ್ರಮಿಸುವಂತೆ ತಿಳಿಸಿದರು.
ಪಂಚಾಯತ್ ಪ್ರಗತಿ ಸೂಚ್ಯಂಕದಲ್ಲಿ 9 ವಿಷಯಗಳಿದ್ದು, ಪ್ರತಿಯೊಂದು ಗ್ರಾಮ ಪಂಚಾಯಿತಿಯು 9 ವಿಷಯಗಳಲ್ಲಿಯೂ ನಿಗಧಿತ ಗುರಿ ಸಾಧಿಸಿದಾಗ ಮಾತ್ರ ಉತ್ತಮ ಗ್ರಾಮ ಪಂಚಾಯಿತಿ ಆಗಲು ಸಾಧ್ಯ. ಆದ್ದರಿಂದ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಇತರೆ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರ ಪಡೆಯುವಂತೆ ಸೂಚಿಸಿದರು.
ಪಂಚಾಯತ್ ಪ್ರಗತಿ ಸೂಚ್ಯಂಕಕ್ಕೆ ಮಾಹಿತಿ ದಾಖಲಿಸುವ ಕುರಿತು ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಹಾಯಕ ನಿರ್ದೇಶಕರು (ಪಂ.ರಾಜ್) ಹಾಗೂ 14ನೇ ಕಾಡೂರು ಗ್ರಾ.ಪಂ. ಅಧ್ಯಕ್ಷರಾದ ಜಲೇಂದ್ರ ಶೆಟ್ಟಿ ಅವರನ್ನು ತರಬೇತಿ ಕಾರ್ಯಾಗಾರದಲ್ಲಿ ತಮ್ಮ ಜಿಲ್ಲೆಯ ಅನುಭವ ಹಂಚಿಕೊಳ್ಳಲು ಆಹ್ವಾನಿಸಲಾಗಿತ್ತು.
ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ, ಧನುಷ್, ಉಪಕಾರ್ಯದರ್ಶಿ (ಆಡಳಿತ) ಧನರಾಜ್, ಮುಖ್ಯ ಲೆಕ್ಕಾಧಿಕಾರಿ, ಶ್ರೀನಿವಾಸ ನಾಯಕ್, ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷರಾದ ಪ್ರದೀಪ್, ಉಪಾಧ್ಯಕ್ಷರಾದ ಸುವರ್ಣಾವತಿ ಹಾಗೂ ಸದಸ್ಯರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ್ ಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರುಗಳು, ಆಯ್ದ ಗ್ರಾಮ ಪಂಚಾಯತ್ ಗಳ ಪಿಡಿಒ ಮತ್ತು ಡಿಇಒ ಗಳು ಹಾಜರಿದ್ದರು





