ಮಂಡ್ಯ: ಹಾಲಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಘೋಷಿಸುವ ಮೂಲಕ ಜಿಲ್ಲೆಯ ಜನರ ಕುತೂಹಲ ಹಾಗೂ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಈ ಹಿಂದೆ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿದ್ದ ಸುಮಲತಾ ತಮ್ಮ ನಿರ್ಧಾರ ಪ್ರಕಟಿಸಿರಲಿಲ್ಲ. ಬಳಿಕೆ ವಿಜಯೇಂದ್ರ ಮತ್ತು ಎಚ್.ಡಿ ಕುಮಾರಸ್ವಾಮಿ ಭೇಟಿ ವೇಳೆಯೂ ತಮ್ಮ ನಿಲುವು ಪ್ರಕಟಿಸಲಿಲ್ಲ. ಆದರೆ ಇಂದು ತಮ್ಮ ನೆಲೆ ಮಂಡ್ಯದಲ್ಲಿ ಬಿಜೆಪಿ ಸೇರಲಿದ್ದೇನೆ ಎಂದು ಘೋಷಿಸಿದ್ದಾರೆ. ಆದರೆ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿಗೆ ಬೆಂಬಲ ನೀಡುವುದಾಗಿ ಹೇಳಿಲ್ಲ. ಆದರೆ ಇತ್ತ ಮಂಡ್ಯ ಪ್ರಚಾರ ಸಭೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಮಾತ್ರ ಸುಮಲತಾ ಬಿಜೆಪಿ ಸೇರ್ಪಡೆ ನಿರ್ಧಾರ ನನಗೂ ಬೆಂಬಲ ಕೊಟ್ಟ ಹಾಗೆ ಎಂದು ಹೇಳಿದ್ದಾರೆ.
ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ ಸುಮಲತಾರ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಬಿಜೆಪಿ ಸೇರುವ ನಿರ್ಧಾರ ತಿಳಿಸಿದ್ದರಿಂದ ನನಗೆ ಬೆಂಬಲ ಕೊಟ್ಟಂತೆ. ಇಂದು ತಿರ್ಮಾನ ಮಾಡಿದ್ದಾರೆ, ಮುಂದೆ ಪ್ರಚಾರಕ್ಕೂ ಕರೆಯುತ್ತೇವೆ ಎಂದಿದ್ದಾರೆ.
ಬಿಜೆಪಿ ಜತೆಗೆ ಸುಮಲತಾ ಅಂಬರೀಶ್‌ಗೆ ಒಳ್ಳೆಯ ಬಾಂಧವ್ಯವಿದೆ. ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಈ ನಿರ್ಧಾರ ಮಾಡಿದ್ದಾರೆ. ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ನಿರ್ಧಾರ ಸ್ವಾಗತಾರ್ಹ. ಈ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸಹಕಾರ ಕೇಳಿದ್ದೇನೆ ಎಂದರು.





