Mysore
21
overcast clouds
Light
Dark

ಕಳಪೆ ಬಿತ್ತನೆ ಬೀಜ-ರಸಗೊಬ್ಬರ ಮಾರಾಟ ಕಂಡು ಬಂದರೆ ಕಠಿಣ ಕ್ರಮ: ವಿ.ಅನ್ಬು ಕುಮಾರ್

ಮಂಡ್ಯ: ಜಿಲ್ಲೆಯಲ್ಲಿ ಕಳಪೆ ಅಥವಾ ಕಲಬೆರೆಕೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಮಾರಾಟ ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬು ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಗುರವಾರ(ಜು.11) ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬಿತ್ತನೆ ಬೀಜದ ಮೊಳಕೆ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕು. ಇದರಿಂದ ಮುಂದಾಗುವ ತೊಂದರೆಯನ್ನು ತಡೆಗಟ್ಟಬಹುದು ಎಂದರು.

ಮನೆ ಹಾನಿ ಪ್ರಕರಣಗಳು ಒಂದು ವಾರದೊಳಗೆ ವಿಲೇಯಾಗಬೇಕು. ಪ್ರಕೃತಿ ವಿಕೋಪದಿಂದ ಬಡವರ ಮನೆ ಹಾನಿಯಾದ ಸಂದರ್ಭದಲ್ಲಿ ಶೀಘ್ರವೇ ರಿಪೇರಿ ಅಥವಾ ಮನೆ ಕಟ್ಟಿಕೊಳ್ಳಲು ಅನುಕೂಲವಗುವಂತೆ ಪರಿಹಾರ ಒದಗಿಸುವ ಕೆಲಸವನ್ನು ಸರಳೀಕರಣಗೊಳಿಸಲಾಗಿದೆ. ಸಣ್ಣ ಪುಟ್ಟ ಮನೆ ಹಾನಿಯಾದಾಗ ಎರಡು ಅಥವಾ ಮೂರು ದಿನಗಳಲ್ಲಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿ ಎಂದು ನಿರ್ದೇಶಿಸಿದರು.

ಕುಡಿಯುವ ನೀರು ಗಂಭೀರ ವಿಷಯವಾಗಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಪರೀಕ್ಷೆ ನಿಗದಿತವಾಗಿ ನಡೆಯಬೇಕು. ಪರೀಕ್ಷೆ ನಡೆಸಿರುವ ಬಗ್ಗೆ ವರದಿಯನ್ನು ಪಡೆದುಕೊಂಡು ಪರಿಶೀಲಿಸಬೇಕು. ಕಲುಷಿತ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ, ವಿದ್ಯಾರ್ಥಿಗಳು ಮಾಹೆವಾರು ನಡೆಸುವ ಪರೀಕ್ಷೆಯ ವರದಿಯನ್ನು ಗಣಕೀಕರಣ ಮಾಡಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ಮಾಹೆ ಪರಿಶೀಲನೆ ನಡೆಸಬೇಕು, ಆಗ ಮಾತ್ರ ಎಸ್.ಎಸ್.ಎಲ್ ಸಿ ಪರೀಕ್ಷೆ ಫಲಿತಾಂಶ ಉತ್ತಮಗೊಳಿಸಲು ಸಾಧ್ಯ ಎಂದು ಹೇಳಿದರು.

ಬಾಲ್ಯ ವಿವಾಹ ಹಾಗೂ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಗುಪ್ತಚರ ಕೆಲಸಗಳನ್ನು ಹೆಚ್ಚುಗೊಳಿಸಬೇಕು. ಕಂದಾಯ, ಗ್ರಾಮ ಪಂಚಾಯತಿ ಹಾಗೂ ಪೊಲೀಸ್ ಇಲಾಖೆಗಳು ಅಂತರಿಕವಾಗಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಮಾಹಿತಿಗಳನ್ನು ಕಲೆಹಾಕಿ, ಬಾಲ್ಯ ವಿವಾಹ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಡೆಂಘಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯಲ್ಲಿ ಮಾಡಿಕೊಂಡಿರುವ ಬೆಡ್ ವ್ಯವಸ್ಥೆ, ಔಷಧಗಳ ದಾಸ್ತಾನು ಕುರಿತು ಮಾಹಿತಿ ಪಡೆದುಕೊಂಡರು.

ಜಿಲ್ಲಾಧಿಕಾರಿ ಡಾ: ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಮಳೆಯ ಪ್ರಮಾಣ, ಜಲಾಶಯದಲ್ಲಿ ನೀರಿನ ಪ್ರಮಾಣ, ಬೆಳೆ ಹಾನಿ, ಮನೆ ಹಾನಿ, ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಪ್ರಕರಣಗಳು, ಎನ್.ಹೆಚ್. ರಸ್ತೆಗಳು ಸೇರಿದಂತೆ ಜಿಲ್ಲೆಯ ಮಾಹಿತಿಯನ್ನು ಸಭೆಗೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು, ನರೇಗಾ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಜೆ.ಜೆ.ಎಂ, ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮಾಹಿತಿಯನ್ನು ಸಭೆಗೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.