ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಇಲ್ಲಿಗೆ ದೊಡ್ಡ ಕೈಗಾರಿಕೆ ತರುವ ಬಗ್ಗೆ ನಾನೇ ಸ್ವತಃ ರಾಜ್ಯ ಸರ್ಕಾರದ ಸಹಕಾರ ಕೋರುತ್ತೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ನಗರದ ಮೈಶುಗರ್ ಪ್ರೌಢಶಾಲೆಯ ಮೈದಾನದಲ್ಲಿ ಶನಿವಾರ ನಡೆದ ಮೈಶುಗರ್ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಜನರ ಕನಸು ನನಸು ಮಾಡುವುದು ಎಲ್ಲರ ಕರ್ತವ್ಯ. ರಾಜಕೀಯ ಬದಿಗಿಟ್ಟು ಎಲ್ಲರೂ ಕೆಲಸ ಮಾಡಿದರೆ ಜನರಿಗೆ ಒಳ್ಳೆಯದಾಗುತ್ತದೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಮಂಡ್ಯ ಜನರ ಆಶೀರ್ವಾದದಿಂದ ನಾನು ಸಂಸದನಾಗಿ ಕೇಂದ್ರ ಸಚಿವನಾಗಿದ್ದೇನೆ. ಕಳೆದ ಚುನಾವಣೆಯಲ್ಲಿ ಪಕ್ಷಭೇದ ಮರೆತು, ಜಾತಿ ಮರೆತು ನನ್ನನ್ನು ಆಯ್ಕೆ ಮಾಡಿದ್ದೀರಿ. ನರೇಂದ್ರ ಮೋದಿ ಅವರು ನನಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಗಳನ್ನು ನೀಡಿದ್ದಾರೆ. ನನ್ನಿಂದ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ಮೈಶುಗರ್ ಕಾರ್ಖಾನೆ ಪುನಶ್ಚೇತನಕ್ಕೆ ೪೦೦ ಕೋಟಿ ಹಣವನ್ನು ಬಜೆಟ್‌ನಲ್ಲಿ ಇಟ್ಟು ತಕ್ಷಣವೇ ೧೦೦ ಕೋಟಿ ಹಂಚಿಕೆ ಮಾಡಿ, ಕಾರ್ಖಾನೆ ಪುನಶ್ಚೇತನಕ್ಕೆ ಹಣ ಮೀಸಲಿಟ್ಟಿದ್ದೆ, ಅಷ್ಟರಲ್ಲಿ ನನ್ನ ಸರ್ಕಾರ ಅಧಿಕಾರ ಕಳೆದುಕೊಂಡಿತು ಎಂದು ಹೇಳಿದರು.
ಕಾಮಗಾರಿ ಮಾಡಲೂ ರಾಜಕೀಯ ;
ರೈತ ಭವನ ಅಭಿವೃದ್ಧಿಗೆ ೪ ಕೋಟಿ ಅನುದಾನ ನೀಡಿದ್ದೇನೆ. ಆ ಹಣವನ್ನು ಯಾರು ಖರ್ಚು ಮಾಡಬೇಕು ಎಂಬ ಬಗ್ಗೆ ದೊಡ್ಡ ರಾಜಕೀಯ ನಡೆಯುತ್ತಿದೆ. ಅದು ಬೇಸರದ ಸಂಗತಿ. ಮಿಮ್ಸ್ ಅಭಿವೃದ್ಧಿಗೂ ಹಣ ನೀಡಿದ್ದು ಅಲ್ಲಿಯೂ ಕಾಮಗಾರಿಗಳು ಶಿಘ್ರದಲ್ಲೇ ಪ್ರಾರಂಭವಾಗಲಿದೆ. ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಮೂಲಕ ೨.೫೦ ಕೋಟಿ ರೂ. ನೀಡಿದ್ದೇನೆ ಎಂದು ಹೇಳಿದರು.
ಬೆಂಗಳೂರಿಗೆ ೪,೫೦೦ ಎಲೆಕ್ಟ್ರಿಕ್ ಬಸ್ ;
ಪ್ರಧಾನಮಂತ್ರಿಗಳ ಪಿಎಂ ಇ ಡ್ರೈವ್ ಯೋಜನೆ ಮೂಲಕ ಬೆಂಗಳೂರು ನಗರಕ್ಕೆ ೪,೫೦೦ ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದರು. ಜಿಲ್ಲಾ ಕೇಂದ್ರಗಳಲ್ಲಿ ಪ್ರವಾಸಿ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಕಾರಣಕ್ಕೆ ೨೦ ರಿಂದ ೨೫ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುವ ಅಗತ್ಯವಿದೆ, ಅದಕ್ಕೂ ಕೂಡ ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಮೈಶುಗರ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ, ಉನ್ನತ ಹುದ್ದೆಯಲ್ಲಿರುವ ಎಚ್.ಕೆ. ಉಮೇಶ, ಪಿ.ಎಸ್. ರವಿ, ಸಿ. ರಾಜು, ಸುರೇಶ್ ಬಾಬು, ಕೆ.ಎಂ. ನಾಗೇಶ್, ಡಾ. ಎಂ. ಮಾದಯ್ಯ ಹಾಗೂ ನಿವೃತ್ತ ಶಿಕ್ಷಕರಾದ ಎಂ.ಎಸ್. ಮನ್ನಾರ್ ಕೃಷ್ಣರಾವ್, ಪ್ರೊ. ಗುಬ್ಬಯ್ಯ, ಚಿಕ್ಕಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮೈಶುಗರ್ ಶಾಲೆ ಕುರಿತು ನಿವೃತ್ತ ಶಿಕ್ಷಕ ಲಿಂಗಣ್ಣ ಬಂಧುಕಾರ್ ಅವರ ಸಂಪಾದಕತ್ವದ ಪುಸ್ತಕವನ್ನು ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಬಿಡುಗಡೆ ಮಾಡಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್), ಶಾಸಕ ಎಚ್.ಟಿ. ಮಂಜು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಸಾಹಿತಿ ಪ್ರೊ. ಎಂ.ಕೃಷ್ಣೇಗೌಡ, ಪದ್ಮಶ್ರೀ ಪುರಸ್ಕೃತ ಕೆ.ಎಸ್. ರಾಜಣ್ಣ, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ನಿವೃತ್ತ ಮುಖ್ಯ ಶಿಕ್ಷಕ ಟಿ. ರಮೇಶ್, ಮೈಷುಗರ್ ಪ್ರೌಢಶಾಲಾ ಸಮಿತಿಯ ಬಿ.ಟಿ.ಜಯರಾಮ್, ಪ್ರೊ. ಬಿ.ಕೆ. ಚಂದ್ರಶೇಖರಗೌಡ, ಶಿವಲಿಂಗಯ್ಯ, ಎಸ್.ಸಿ. ಸತ್ಯನಾರಾಯಣರಾವ್ ಉಪಸ್ಥಿತರಿದ್ದರು.





