Mysore
20
overcast clouds
Light
Dark

ನುರಿತ ಕೌಶಲವಿದ್ದರೆ ಉದ್ಯೋಗ ಮತ್ತು ಯಶಸ್ಸು: ಮಧು ಜಿ.ಮಾದೇಗೌಡ

ಮಂಡ್ಯ: ‘ನಮ್ಮಲ್ಲಿ ನುರಿತ ಕೌಶಲವಿದ್ದರೆ ಉದ್ಯೋಗ ಮತ್ತು ಯಶಸ್ಸು ಲಭಿಸಲಿದೆ. ಯಶಸ್ಸು ನಿರಂತರ ಬೇಕೆಂದರೆ ನಮ್ಮಲ್ಲಿರುವ ಕಾರ್ಯ ಕುಶಲತೆ ಕೊನೆಯಾಗಕೂಡದು’ ಎಂದು ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ಹೇಳಿದರು.

ನಗರದ ‘ಗಾಂಧಿ ಭವನ’ದಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟಿನ ಕಸ್ತೂರಿ ಬಾ ಮಹಿಳೆಯರ ಉಚಿತ ಹೊಲಿಗೆ ತರಬೇತಿ ಕೇಂದ್ರ ವತಿಯಿಂದ ಶನಿವಾರ ಆಯೋಜಿಸಿದ್ದ 49ನೇ ಶಿಬಿರದ ಸಮಾರೋಪ ಹಾಗೂ 50ನೇ ಹೊಸ ಬ್ಯಾಚ್ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪು ಸಿದ್ಧಗೊಳಿಸುವ ಉದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಹಾಗಾಗಿ, ಶಿಬಿರದಲ್ಲಿ ಕಲಿತದ್ದನ್ನು ಮರೆಯದೆ, ವೃತ್ತಿಯಲ್ಲಿ ನೈಪುಣ್ಯ ಸಾಧಿಸಿ. ಆರ್ಥಿಕವಾಗಿ ಸಬಲರಾಗಿ. ಸ್ಫೂರ್ತಿಯುತ ಬದುಕು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.

ಟ್ರಸ್ಟ್ ವತಿಯಿಂದ ವರ್ಗ ಮತ್ತು ಧರ್ಮ ಭೇದವಿಲ್ಲದೆ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ನೀಡುತ್ತಾ ಬಂದಿದ್ದೇವೆ. ಈವರೆಗೂ ಸುಮಾರು 3000 ಮಹಿಳೆಯರು ತರಬೇತಿ ಪಡೆದಿದ್ದಾರೆ. ನೀವು ಹೊಲಿಗೆ ವೃತ್ತಿಯಲ್ಲಿ ನೈಪುಣ್ಯ ಸಾಧಿಸಿದರೆ ನಮ್ಮ ಸಂಸ್ಥೆ ವತಿಯಿಂದಲೇ ಉದ್ಯೋಗ ಅವಕಾಶವನ್ನೂ ಕಲ್ಪಿಸಲಾಗುವುದು ಎಂದರು.

ಟ್ರಸ್ಟ್ ನ ಕಾರ್ಯದರ್ಶಿ ನಂಜೇಗೌಡ ಮಾತನಾಡಿ, ಮಹಿಳೆಯರು ಮನೆಗೆಲಸ, ಮಕ್ಕಳ ಪೋಷಣೆ, ಕುಟುಂಬ ನಿರ್ವಹಣೆಯಂತಹ ಜವಾಬ್ದಾರಿಗಳ ನಡುವೆ ತರಬೇತಿ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆರ್ಥಿಕ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಇದೇ ಸಂದರ್ಭದಲ್ಲಿ ಹೊಲಿಗೆ ಉಚಿತ ತರಬೇತಿ ಪೂರೈಸಿದ 49ನೇ ಬ್ಯಾಚಿನ 83 ಕಲಿಕಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಮಹಾತ್ಮ ಗಾಂಧಿ ಟ್ರಸ್ಟಿನ ಲಿಂಗಣ್ಣ ಬಂಧುಕಾರ್, ಹೊಲಿಗೆ ತರಬೇತಿ ಶಿಕ್ಷಕಿ ಅನಿತಾ, ನಾಗರತ್ನ ಕೆ.ಎಸ್.ರಾಜು ಇದ್ದರು.