Mysore
26
few clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಗೆ ಶಿಕ್ಷೆ

ಮಂಡ್ಯ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಐದೂವರೆ ವರ್ಷ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಕೆ.ಎ. ನಾಗಜ್ಯೋತಿ ತೀರ್ಪು ನೀಡಿದ್ದಾರೆ.

ತಾಲ್ಲೂಕಿನ ಕೊಮ್ಮೇರಹಳ್ಳಿ ಗ್ರಾಮದ ಗಿರೀಶ ಶಿಕ್ಷೆಗೊಳಗಾದ ಆರೋಪಿ. ಕಳೆದ 2021 ಮಾ.3ರ ರಾತ್ರಿ 10.30ರ ಸಮಯದಲ್ಲಿ ಗ್ರಾಮದ ಹಿರಿಯಮ್ಮ ದೇವಿ ದೇವಸ್ಥಾನಕ್ಕೆ ಕೊಮ್ಮೇರಹಳ್ಳಿ -ಎಚ್.ಕೋಡಿಹಳ್ಳಿ ಗ್ರಾಮದ ರಸ್ತೆಯಲ್ಲಿ ಗ್ರಾಮಸ್ಥರ ಜತೆ ಆರತಿಯನ್ನು ತೆಗೆದುಕೊಂಡು ಹೋಗುತ್ತಿದ್ದಾಗ 12 ವರ್ಷದ ಬಾಲಕಿ ಎಲ್ಲರಿಗಿಂತ ಹಿಂದೆ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಗಿರೀಶ ಈಕೆಯನ್ನು ಹಿಂಬಾಲಿಸಿಕೊಂಡು ಬಿಸ್ಕತ್ ಮತ್ತು ಚಾಕೋಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿ, ಯಾರಿಗಾದರೂ ಹೇಳಿದರೆ ಬಾಲಕಿ ಮತ್ತು ಆಕೆಯ ತಂದೆಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದನು.

ಆದರೂ ಈ ಬಾಲಕಿ ಪೋಷಕರಿಗೆ ಈ ವಿಷಯವನ್ನು ಹೇಳಲಾಗಿ, ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿ, ಅಂದಿನ ಇನ್‌ಸ್ಪೆಕ್ಟರ್ ಆನಂದೇಗೌಡ ಅವರು ಆರೋಪಿಯನ್ನು ಬಂಧಿಸಿ, ಭಾದಂಸಂ 363, 354(ಡಿ), 375, 506 ಐಪಿಸಿ & ಕಲಂ 4, 8, 10, 12 ಪೋಕ್ಸೋ ಕಾಯಿದೆ 2012ರ ಅಡಿ ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣವು ಸ್ಪೆಷಲ್ ಕೇಸ್ ಸಂಖ್ಯೆ 80/2021 ರಂತೆ ಮಂಡ್ಯದ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಕೆ.ಎ.ನಾಗಜ್ಯೋತಿ ಅವರು ಆರೋಪಿ ಗಿರೀಶನಿಗೆ ಈತನಿಗೆ ಭಾದಂಸಂ ಕಲಂ 362 ಅಡಿಯಲ್ಲಿನ ಅಪರಾಧಕ್ಕೆ 2 ವರ್ಷಗಳ ಶಿಕ್ಷೆ ಮತ್ತು 10,000 ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ಹಾಗೂ ಭಾದಂಸಂ ಕಲಂ 506 ಅಡಿಯಲ್ಲಿನ ಅಪರಾಧಕ್ಕೆ 6 ತಿಂಗಳ ಶಿಕ್ಷೆ ಮತ್ತು 5,000 ರೂ.ಗಳ ದಂಡ, ಪಾವತಿಸಲು ತಪ್ಪಿದಲ್ಲಿ 9 ತಿಂಗಳು ಸಾದಾ ಶಿಕ್ಷೆಯನ್ನು ಹಾಗೂ ಭಾದಂಸಂ ಪೋಕ್ಸೋ ಕಲಂ 8 ಅಡಿಯಲ್ಲಿನ ಅಪರಾಧಕ್ಕೆ 3 ವರ್ಷಗಳ ಶಿಕ್ಷೆ ಮತ್ತು 15,000 ರೂ.ಗಳ ದಂಡ, ಪಾವತಿಸಲು ತಪ್ಪಿದಲ್ಲಿ 9 ತಿಂಗಳು ಸಾದಾ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!