ಮಂಡ್ಯ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ ದಂಡ ವಿಧಿಸಿ ಮಂಡ್ಯ ಅಧಿಕ ಸೆಷನ್ಸ್ ಮತ್ತು 2ನೇ ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಬಿ.ದಿಲೀಪ್ ಕುಮಾರ್ ಅವರು ತೀರ್ಪು ನೀಡಿದ್ದಾರೆ.
ಮಂಡ್ಯ ನಗರ ತಾವರಗೆರೆ ಬಡಾವಣೆ ನಿವಾಸಿ ವಾಯಿದ್ ಇಕ್ಬಾಲ್ ಅವರ ಮಗ ಅಖೀಬ್ ಉ ಶೇಖ್ ಅಖೀಬ್ ಆಲಂ ಶಿಕ್ಷೆಗೆ ಒಳಗಾದ ಆರೋಪಿ.
ಬಾಲಕಿ ಶಾಲೆಗೆ ಹೋಗುವಾಗ ಮತ್ತು ಬರುವಾಗ ಆಗಾಗ್ಗೆ ಹೋಗಿ ಭೇಟಿ ಮಾಡಿ, ಪುಸಲಾಯಿಸಿ ನಿನ್ನನ್ನು ಪ್ರೀತಿಸುತ್ತಿದ್ದು, ನೀನು ನನ್ನನ್ನು ಪ್ರೀತಿಸದೇ ಹೋದರೆ ಕೈಯನ್ನು ಕೊಯ್ದುಕೊಳ್ಳುತ್ತೇನೆ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿ ಕಳೆದ 2023ರ ಜನವರಿ.27ರಂದು ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟ ಬೆಟ್ಟದ ದೇವಸ್ಥಾನದ ಹಿಂಭಾಗದಲ್ಲಿ ಕಾರನ್ನು ನಿಲ್ಲಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ವಿಚಾರವನ್ನು ನಿಮ್ಮ ತಂದೆ-ತಾಯಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ.
ಇದರಿಂದ ಮನನೊಂದ ಬಾಲಕಿ ಮನೆಯ ಕೊಠಡಿಯಲ್ಲಿ ಫ್ಯಾನ್‌ಗೆ ವೇಲಿನಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದಳು. ಈ ಸಂಬಂಧ ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ತ್ವರಿತಗತಿಯಲ್ಲಿ 2ನೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಬಿ.ದಿಲೀಪ್ ಕುಮಾರ್ ಅವರು ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 7 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.





