Mysore
27
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಸೆ. 13ರಂದು ಮಂಡ್ಯ ವಿ.ವಿ. ಘಟಿಕೋತ್ಸವ | 1,457 ಸ್ನಾತಕ, 645 ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದ ಮೊದಲ ಮತ್ತು ಎರಡನೇ ವಾರ್ಷಿಕ ಘಟಿಕೋತ್ಸವವನ್ನು ಸೆಪ್ಟೆಂಬರ್ 13ರಂದು ಆಯೋಜಿಸಲು ಶುಕ್ರವಾರ ನಡೆದ ಮಂಡ್ಯ ವಿಶ್ವವಿದ್ಯಾಲಯದ ಎರಡನೇ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಮಂಡ್ಯ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರೂ ಆದ ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ಅವರು, ಮಂಡ್ಯ ವಿವಿ ಆಗಿ ರಚನೆಗೊಂಡ ನಂತರ‌ ನಡೆಯುತ್ತಿರುವ ಪ್ರಥಮ‌ ಘಟಿಕೋತ್ಸವ ಇದಾಗಿದ್ದು ಅರ್ಥಪೂರ್ಣವಾಗಿ, ಅಚ್ಚುಕಟ್ಟಾಗಿ ಮತ್ತು ವಿಜೃಂಭಣೆಯಿಂದ ಆಯೋಜಿಸಬೇಕು ಎಂದರು.

ದಾನಿಗಳು ಸ್ಥಾಪಿಸಿರುವ ದತ್ತಿಗಳಿಂದ ಬಹುಮಾನಗಳನ್ನು ನೀಡುವುದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗಲಿದೆ. ಶೈಕ್ಷಣಿಕವಾಗಿಯೂ ನೆರವಾಗಲಿದೆ ಎಂದರು. ಸಾಕಷ್ಟು ದಾನಿಗಳು ದತ್ತಿ ನಿಧಿ ಸ್ಥಾಪಿಸಲು ಮುಂದೆ ಬರುತ್ತಾರೆ. ಅಂತಹವರ ನೆರವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ರೀಡಾ ಕೂಟ ಯೋಜನೆ
ವಿವಿ ಕುಲಪತಿ ಡಾ.ಪುಟ್ಟರಾಜು ಮಾತನಾಡಿ, ಮಂಡ್ಯ ವಿವಿಯು ಸಂಯೋಜಿತ ವಿ.ವಿ. ಆಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಮೊದಲನೇ ವರ್ಷದ ವಿದ್ಯಾರ್ಥಿಗಳು ಮಾತ್ರ ಮಂಡ್ಯ ವಿವಿ ವ್ಯಾಪ್ತಿಗೆ ಬರುತ್ತಾರೆ ಮತ್ತು 2024-25ನೇ ಶೈಕ್ಷಣಿಕ ಸಾಲಿನಿಂದ ಮೊದಲನೇ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳು ಬರುವುದರಿಂದ ಮಾಂಡವ್ಯ ವಲಯ ಕ್ರೀಡಾಕೂಟ ಆಯೋಜಿಸುವ ಸಂಬಂಧ ದೈಹಿಕ ಶಿಕ್ಷಣ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಲು ಸಭೆಯ ಅನುಮೋದನೆ ಕೋರಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ಅಲ್ಲದೆ, ಮಂಡ್ಯ ಜಿಲ್ಲೆಯ ಸಮಗ್ರ ಇತಿಹಾಸ, ಸಾಹಿತ್ಯ ಜಾನಪದ, ವಿದ್ವಾಂಸರು, ಸ್ವಾತಂತ್ರ್ಯ, ಕೃಷಿ, ನೀರಾವರಿ, ಸಾಮಾಜಿಕ, ಆರ್ಥಿಕ ಐತಿಹ್ಯ ಒಳಗೊಂಡ ‘ಮಂಡ್ಯ ವಿವಿ ಗೀತೆ’ ಹಾಗೂ ‘ವಿವಿ ಆವರಣ’ಕ್ಕೆ ಸೂಕ್ತ ಹೆಸರನ್ನು ಸೂಚಿಸಲು ನೀಡಿದ್ದ ಕರೆಗೆ ಉತ್ತಮ ಸ್ಪಂದನೆ ಬಂದಿದೆ. ಈ ಸಂಬಂಧ ವಿ.ವಿ. ಹಂತದಲ್ಲಿ ಸಮಿತಿ ರಚಿಸಿದ್ದು, ಅಂತಿಮಗೊಳಿಸುವ ಕೆಲಸ ನಡೆದಿದೆ ಎಂದು ಹೇಳಿದರು.

2,102 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ

ವಿವಿ ಕುಲಸಚಿವ (ಮೌಲ್ಯಮಾಪನ)(ಪ್ರಭಾರ) ಡಾ.ಯೋಗನರಸಿಂಹಚಾರಿ ಮಾತನಾಡಿ, 2019-22 ಮತ್ತು 2020-23ನೇ ಶೈಕ್ಷಣಿಕ ಸಾಲುಗಳ ಒಟ್ಟು 1,457 ಸ್ನಾತಕ ವಿದ್ಯಾರ್ಥಿಗಳು ಹಾಗೂ 2019-20, 2020-21 ಮತ್ತು 2021-22ನೇ ಶೈಕ್ಷಣಿಕ ಸಾಲುಗಳ ಒಟ್ಟು 645 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2,102 ಅರ್ಹ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಪಡೆಯಲು ಅರ್ಹರಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಅಲ್ಲದೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ Rank ಗಳನ್ನು ಪ್ರದಾನ ಮಾಡಲು ಮೈಸೂರು ವಿ.ವಿ. ಅಳವಡಿಸಿಕೊಂಡಿರುವ ನಿಯಮಗಳನ್ನೆ ಮಂಡ್ಯ ವಿ.ವಿ.ಯಲ್ಲೂ ಅಳವಡಿಸಿಕೊಳ್ಳಲು ಹಾಗೂ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಎಲ್ಲಾ ದತ್ತಿಗಳನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡಿರುವುದರಿಂದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವಾಗಿ ಘಟಿಕೋತ್ಸವದಲ್ಲಿ ಪ್ರದಾನ ಮಾಡುವುದಕ್ಕೆ ಅನುಮೋದನೆ ಕೋರಿದರು. ಇದಕ್ಕೆ ಸಭೆ ಸರ್ವಾನುಮತದಿಂದ ಅನುಮೋದಿಸಿತು.

ಸಭೆಯಲ್ಲಿ ಕುಲಸಚಿವ (ಆಡಳಿತ) ಡಾ.ಶಿವಚಿತ್ತಪ್ಪ, ಹಣಕಾಸು ಅಧಿಕಾರಿ ಡಾ.ಪಿ.ಮನೋಹರ್, ಸಿಂಡಿಕೇಟ್ ಸದಸ್ಯರಾದ ಡಾ.ಎಸ್.ಎಲ್.ಸುರೇಶ್, ಸಿ.ಜಯರಾಮು, ಕೆ.ಶಿವಶಂಕರ್, ಬಿ.ರಾಜಣ್ಣ, ಕೆ.ಟಿ. ಅಪ್ಪಾಜಪ್ಪ, ಎಂ.ಸಿ.ಸತೀಶ್ ಬಾಬು ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.

Tags: