ಮಂಡ್ಯ : ಪ್ರಸ್ತುತ ಭಾರತ ದೇಶದಲ್ಲಿ ಮಹಿಳಾ ಸಾಕ್ಷರತೆ ಶೇ.69ರಷ್ಟಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.
ನಗರದ ಹರ್ಡೀಕರ್‌ಭವನದಲ್ಲಿ ರಾಷ್ಟ್ರೀಯ ಭೀಮ ಪಡೆ ರಾಜ್ಯ ಮತ್ತು ಜಿಲ್ಲಾ ಘಟಕ ಭಾರತ ಪ್ರಥಮ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿ ಬಾಯಿ ಫುಲೆ ಅವರ 194ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಅಕ್ಷರದವ್ವ’ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1901ರಲ್ಲಿ ಸಾಕ್ಷರತೆ ಪ್ರಮಾಣ ಶೇ.06 ಇತ್ತು, ಮಹಿಳಾ ಸಾಕ್ಷರತೆ ಪ್ರಮಾಣ ಶೂನ್ಯವಿತ್ತು, 1950ರಲ್ಲಿ ಶೇ.19 ಹೆಚ್ಚಾಗಿದೆ, ಮಹಿಳಾ ಸಾಕ್ಷರತೆ ಪ್ರಮಾಣ ಶೇ.01 ಇತ್ತು, 2025ರಲ್ಲಿ ಶೇ.76 ಇದೆ, ಮಹಿಳಾ ಸಾಕ್ಷರತೆ ಶೇ.69 ಇದೆ. ಇದಕ್ಕೆ ಕಾರಣ ಶಿಕ್ಷಣ ಕ್ರಾಂತಿಯ ಹರಿಕಾರರಾದ ಜ್ಯೋತಿಬಾಪುಲೆ, ಸಾವಿತ್ರಿ ಬಾಯಿ ಪುಲೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಭಾರತ ಸಂವಿಧಾನದ ಎಲ್ಲಾ ಹಕ್ಕುಗಳಾಗಿದೆ ಎಂದು ಹೇಳಿದರು.
ನಮ್ಮ ದೇಶದ ಗುರಿ 2047ಕ್ಕೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷವಾಗುತ್ತದೆ. ಆಗ ಪುರುಷ ಮತ್ತು ಮಹಿಳಾ ಸಾಕ್ಷರತೆ ಪ್ರಮಾಣ ಶೇ.100ರಷ್ಟು ಸಾಧಿಸುವ ಸಂಕಲ್ಪವಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ರಾಷ್ಟ್ರೀಯ ಭೀಮ ಪಡೆ ರಾಜ್ಯಾಧ್ಯಕ್ಷ ಎಚ್.ಎ.ಆತ್ಮಾನಂದ, ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯರಷ್ಟೇ ಶೋಷಣೆಗೆ ಒಳಗಾದ ಇನ್ನೊಂದು ವರ್ಗವೆಂದರೆ ಮಹಿಳೆಯರು. ಮನುಸಂವಿಧಾನದ ಪ್ರಕಾರ ಮಹಿಳೆ ವಿದ್ಯೆ ಕಲಿಯಲು ಅರ್ಹಳಲ್ಲ. ಮಹಿಳೆಯರ ಸ್ವಾತಂತ್ರ್ಯ ಹರಣದ ಪ್ರಮುಖ ಭಾಗ ವಿದ್ಯೆಯೇ ಆಗಿತ್ತೆನ್ನಬಹುದು ಎಂದು ಹೇಳಿದರು.
ಶಿಕ್ಷಣದ ಮುಖಾಂತರ ಮಾತ್ರ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಸಮಾನತೆಯನ್ನು ತರುವುದು ಸಾಧ್ಯ ಎಂಬುದು ಮಹಾತ್ಮಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಿದ್ಧಾಂತವಾಗಿತ್ತು. ಅದಕ್ಕೆಂದೇ ಅವರು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಶೂದ್ರರು-ಅತಿಶೂದ್ರರು ಮತ್ತು ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಹೊಸ ಮನ್ವಂತರವೊಂದಕ್ಕೆ ನಾಂದಿ ಹಾಡಿದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕಿಯರು ಮತ್ತು ನಿವೃತ್ತ ಶಿಕ್ಷಕಿಯರಿಗೆ ಅಕ್ಷರದವ್ವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಾ.ದಳ ನಾಯಕ, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ಪ್ರಾಧ್ಯಾಪಕಿ ಪ್ರೊ.ಪುಷ್ಪ, ಬಿಜೆಪಿ ವೈದ್ಯಕೀಯ ಪ್ರಕೋಷ್ಟ ರಾಜ್ಯಾಧ್ಯಕ್ಷ ಡಾ.ಸದಾನಂದ, ಬಿಜೆಪಿ ಉಪಾಧ್ಯಕ್ಷ ಕೆಂಪಬೋರಯ್ಯ, ನಗರ ಘಟಕ ಅಧ್ಯಕ್ಷ ವಸಂತಕುಮಾರ್, ರಾಷ್ಟ್ರೀಯ ಭೀಮ ಪಡೆ ರಾಜ್ಯ ಉಪಾಧ್ಯಕ್ಷ ಕೆ.ಆರ್.ನಿತ್ಯಾನಂದ, ಜಿಲ್ಲಾ ಘಟಕ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ವೈರಮುಡಿ, ಕಾರ್ಯದರ್ಶಿ ಶಶಿಕುಮಾರ್, ಸುದಾನುಮ, ಮಂಗಳಕುಮಾರಿ, ಸರೋಜಿನಿ ಇತರರಿದ್ದರು.





