ಮಂಡ್ಯ: ಜಿಲ್ಲೆಯಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಹೆಮ್ಮೆ ಡಾ.ಎಂ.ಹೆಚ್.ಅಂಬರೀಶ್ ಹಾಗೂ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಭಾವಚಿತ್ರಗಳನ್ನು ಬಳಸಬೇಕು ಎಂದು ಅಖಿಲ ಕರ್ನಾಟಕ ಧರ್ಮರಾಯ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕಾಚೋವಳ್ಳಿ ನಂಜೇಗೌಡ ತಿಳಿಸಿದರು.
ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಎಂ.ಹೆಚ್.ಅಂಬರೀಶ್ ಹಾಗೂ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರು ರಾಜಕೀಯ ಹೊರತು ಪಡಿಸಿ ಜಿಲ್ಲೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರನ್ನು ಸಮ್ಮೇಳನದ ಸಂದರ್ಭದಲ್ಲಿ ನೆನೆಯುವುದು ಮುಖ್ಯ ಎಂದರು.
ಈ ಸಂಬಂಧ ಸರ್ಕಾರವಾಗಲಿ, ಸಾಹಿತ್ಯ ಪರಿಷತ್ತಿನ ಸಮಿತಿಗಳಾಗಲಿ ಅವರು ನೀಡುವ ಜಾಹಿರಾತು, ಭಿತ್ತಿಪತ್ರ, ಆಹ್ವಾನ ಹಾಗೂ ಪ್ರಚಾರದ ಪ್ರತಿಗಳಲ್ಲಿ ಬಳಸದೇ ಇರುವುದು ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕಲಾಸೇವೆ ನೀಡಿ, ಮಂಡ್ಯ ಎಂದರೆ ಇಂಡಿಯಾ ಎನ್ನುವ ಮಟ್ಟಕ್ಕೆ ಕೊಂಡೊಯ್ದ ಮಹಾನ್ ಚೇತನ ಅಂಬರೀಶ್ ಮತ್ತು ಜಿಲ್ಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಿ, ಕಲೆ ಹಾಗೂ ರೈತರ ಧ್ವನಿಯಾಗಿದ್ದ ಕೆ.ವಿ.ಶಂಕರಗೌಡ ಅವರ ಭಾವಚಿತ್ರವನ್ನು ಸಮ್ಮೇಳನ ಸಂಬಂಧಿತ ವಿಷಯಗಳನ್ನು ಬಳಸಬೇಕು. ಹಾಗೆಯೇ ಸಮ್ಮೇಳನದ ಯಾವುದಾದರೂ ದ್ವಾರಕ್ಕೆ ಅಂಬರೀಶ್ ಅವರ ಹೆಸರನ್ನು ಇಡುವಂತೆ ಒತ್ತಾಯ ಪೂರ್ವಕ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಗೌಡ, ಕುಮಾರ್, ಶಿವರಾಜ್ ಗೌಡ, ಸ್ವಾಮಿಗೌಡ, ವರದರಾಜು ಉಪಸ್ಥಿತರಿದ್ದರು.





