ಮಂಡ್ಯ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಬೆಲೆ ಏರಿಕೆ ಹೆಚ್ಚಾಗಿದ್ದು, ಇದ್ದರಿಂದ ಸಾರ್ವಜನಿಕರು ತತ್ತರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಖಂಡಿಸಿ ಏಪ್ರಿಲ್ 2ರಂದು ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಪ್ರತಿಭಟನಾ ರ್‍ಯಾಲಿ ಹಾಗೂ ಏ.೦8ರಂದು ಜನಾಕ್ರೋಷ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಹೋರಾತ್ರಿ ಪ್ರತಿಭಟನಾ ರ್‍ಯಾಲಿಯ ಹಾಗೂ ಜನಾಕ್ರೋಶ ರ್‍ಯಾಲಿಯ ಮೂಲಕ ಬೆಲೆ ಏರಿಕೆ ಸಂಬಂಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲು ಗ್ಯಾರೆಂಟಿ ಹೆಸರಿನಲ್ಲಿ ಬೆಲೆ ಏರಿಕೆ ಮಾಡುತ್ತಿದ್ದು, ಅನಗತ್ಯ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆಯಾಗಿ ಹೆಚ್ಚಿಸಿ, ತನ್ನ ಬೊಕ್ಕಸ ತುಂಬಿಕೊಳ್ಳುವಲ್ಲಿ ನಿರತವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಿನಿಂದಲೂ ಮೂರು ಬಾರಿ ಹಾಲಿನ ದರ ಏರಿಕೆ ಮಾಡಿ, ರೈತರಿಗೆ ಪ್ರೋತ್ಸಾಹ ಧನ ಹೆಚ್ಚಿಸುತ್ತೇವೆ ಎಂದು ಹೇಳಿದ್ದು, ಮಾತಿಗೆ ತಕ್ಕಂತೆ ನಡೆದುಕೊಳ್ಳದೇ ಇದ್ದು, ರೈತರಿಗೆ ಸುಮಾರು 662 ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಇದೀಗ 9 ರೂ ಬೆಲೆ ಏರಿಕೆ ಮಾಡಿ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ಹೆಚ್ಚಿಸಿಲ್ಲ ಎಂದು ದೂರಿದರು.
ವಿದ್ಯುತ್ ದರ, ಸರ್ಕಾರಿ ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬೆಲೆ, ಮುದ್ರಾಂಕ ಶುಲ್ಕ, ವೃತ್ತಿಪರ ಸೇವೆಗಳ ಬೆಲೆ ಏರಿಕೆ ಮಾಡಿ, ಸಾರ್ವಜನಿಕರಿಗೆ ಜೀವನ ನಡೆಸಲಾಗದಂತೆ ಮಾಡಿದ್ದು, ಎಸ್ಸಿಪಿ ಟಿಎಸ್ಪಿ ಯೋಜನೆಯ 38,860,52 ಕೋಟಿ ಹಣವನ್ನು ಗ್ಯಾರೆಂಟಿ ಹೆಸರಿನಲ್ಲಿ ವಿನಿಯೋಗಿಸಿ ದಲಿತ ಸಮುದಾಯಕ್ಕೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.
ರಾಜ್ಯದ ಬಡವರ, ರೈತರ ಮತ್ತು ಮಹಿಳೆಯರ ಹಿತ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಅಲ್ಪಸಂಖ್ಯಾತರಿಗೆ ಶೇ4 ರಷ್ಟು ಮೀಸಲಾತಿ, ರಾಜ್ಯದ ಜನತೆಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಪರ ಎಂಬುದನ್ನು ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಏ.7ರಂದು ನಡೆಯಲಿರುವ ಜನಾಕ್ರೋಷ ರ್‍ಯಾಲಿಯು ಏ.೦8ರಂದು ಮಂಡ್ಯದಲ್ಲಿ ಜಾಗೃತಿ ಮೂಡಿಸಲಿದ್ದು, ಸುಮಾರು 5 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಟಿ.ಎಸ್.ವಿವೇಕ್, ಉಪಾಧ್ಯಕ್ಷ ಬಿ.ಕೃಷ್ಣ, ನಗರ ಅಧ್ಯಕ್ಷ ವಸಂತ್, ಮಾಧ್ಯಮ ವಕ್ತಾರ ನಾಗಾನಂದ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಇದ್ದರು.





