Mysore
15
clear sky

Social Media

ಮಂಗಳವಾರ, 06 ಜನವರಿ 2026
Light
Dark

ರಾಗಿಮುದ್ದನಹಳ್ಳಿ: 75 ಗ್ರಾಂ ಚಿನ್ನದ ಒಡವೆಗಳು ಕಳ್ಳತನ

ಮಂಡ್ಯ: ಮನೆಯವರು ದೇವಾಲಯಕ್ಕೆ ಹೋಗಿರುವುದನ್ನು ಗಮನಿಸಿ 75 ಗ್ರಾಂ ಒಡವೆಗಳನ್ನು ಕಳ್ಳತನ ಮಾಡಿರುವ ಪ್ರಕರಣ ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಗ್ರಾಮದ ಸಿದ್ದೇಗೌಡ ಮತ್ತು ರಾಧಾ ದಂಪತಿ ಮನೆಯಲ್ಲಿ ಕಳ್ಳತನವಾಗಿದ್ದು, ಬೀರುವಿನಲ್ಲಿ 15 ಗ್ರಾಂ ತೂಕದ ಮೂರು ಜೊತೆ ಓಲೆಗಳು, 10 ಗ್ರಾಂ ಕುತ್ತಿಗೆ ಚೈನ್ ಹಾಗೂ 50 ಗ್ರಾಂ ಸರ ಕಳ್ಳತನ ಮಾಡಲಾಗಿದೆ.

ಮಂಡ್ಯ ತಾಲ್ಲೂಕಿನ ದೊಡ್ಡ ಬಾಣಸವಾಡಿ ಗ್ರಾಮಕ್ಕೆ ಕಾರ್ತಿಕ ಮಾಸದ ಮನೆ ದೇವರ ಪೂಜೆಗೆ ಸಿದ್ದೇಗೌಡ ಕುಟುಂಬದವರು ತೆರಳಿದ್ದರು. ಈ ಸಂದರ್ಭವನ್ನೇ ಬಳಸಿಕೊಂಡ ಕಳ್ಳರು ಮನೆಯ ಹಿತ್ತಲಿನಿಂದ ನುಗ್ಗೇಮರದ ಮೇಲೇರಿ ಹೆಂಚುಗಳನ್ನು ತೆಗೆದು, ಜಂತಿಯನ್ನು ಕಿತ್ತು ಅಡುಗೆ ಮನೆಗಿಳಿದಿದ್ದಾರೆ‌.

ನಂತರ ಬೀರು ಬಾಗಿಲ್ಲನ್ನು ಅಲ್ಲಿಯೇ ಪಕ್ಕದಲ್ಲಿದ್ದ ಕೊಡಲಿಯಿಂದ ಒಡೆದು ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಸರಿ ಸುಮಾರು ರಾತ್ರಿ 10.30 ಗಂಟೆಯ ಸುಮಾರಿನಲ್ಲಿ ಕಳ್ಳತನ ಮಾಡಿದ್ದು, ಪೂಜೆ ಮುಗಿಸಿ 11.15 ಗಂಟೆಗೆ ಗ್ರಾಮಕ್ಕೆ ಕುಟುಂಬ ಆಗಮಿಸಿದೆ.

ಮನೆಯೊಳಗೆ ಬಂದು ನೋಡಿದ ಸಿದ್ದೇಗೌಡ ಅವರ ಹೆಂಡತಿ ರಾಧ ಅವರಿಗೆ ಬೀರು ಮುರಿದಿರುವುದು, ಒಡವೆ ಬಾಕ್ಸ್ ಗಳು ಚೆಲ್ಲಾಡಿರುವುದು ಕಂಡುಬಂದಿದೆ. ಆದರೆ ಅಡುಗೆ ಮನೆಯಲ್ಲಿ 10 ಗ್ರಾಂ ತೂಕದ ಚಿನ್ನದ ಗುಂಡಿನ ಸರವನ್ನು ಕಳ್ಳರು ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿದು ಮಂಡ್ಯ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Tags:
error: Content is protected !!