ಮಂಡ್ಯ: ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಆರೋಪಿಗೆ ಪೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಜೈಲು ಶಿಕ್ಷೆ ವಿಧಿಸಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಳಿಗುಂದ ಗ್ರಾಮದ ಯಶ್ವಂತ್ (33) ಶಿಕ್ಷೆಗೊಳಗಾದ ಅಪರಾಧಿ. ಈತ 2019 ರಲ್ಲಿ 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ. ನಂತರ ನೊಂದ ಬಾಲಕಿ ಗರ್ಭವತಿಯಾಗಿದ್ದಳು.
ಈತನ ವಿರುದ್ಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ದಿಲೀಪ್ ಕುಮಾರ್ ಅವರಿದ್ದ ಪೀಠ ಯಶ್ವಂತ್‌ನನ್ನು ಅಪರಾಧಿಯೆಂದು ತೀರ್ಮಾನಿಸಿತು.
ಈ ಹಿನ್ನಲೆ ಯಶ್ವಂತ್‌ಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ 2,500 ರೂ. ದಂಡ ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ 20 ವರ್ಷಗಳ ಕಠಿಣ ಸಜೆ ಮತ್ತು 50 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿತು.ಅಲ್ಲದೇ ನೊಂದ ಬಾಲಕಿಗೆ 50,000 ರೂ. ಪರಿಹಾರ ನೀಡುವಂತೆ ಆದೇಶಿಸಿತು.





